ಕಾಬೂಲ್: ಹಿಂಸಾಚಾರದ ಮೂಲಕವೇ ಅಫ್ಘಾನಿಸ್ತಾನದ ಆಡಳಿತವನ್ನು 2021ರ ಆಗಸ್ಟ್ ನಲ್ಲಿ ವಶಕ್ಕೆ ಪಡೆದಿರುವ ತಾಲಿಬಾನ್, ಇದೀಗ ರಷ್ಯಾ ಮತ್ತು ಉಕ್ರೇನ್ ಗೆ ‘ಸಂಯಮ’ದಿಂದ ಇರುವಂತೆ ಮತ್ತು ಶಾಂತಿಯುತ ಮಾತುಕತೆ ಮೂಲಕ ಬಿಕ್ಕಟ್ಟನ್ನು ಶಮನಗೊಳಿಸುವಂತೆ ಸಲಹೆ ನೀಡಿದೆ.
‘ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನವು ಉಕ್ರೇನ್ ನಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಾಗರಿಕರ ಸಾವುನೋವಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ. ಎರಡು ಬಣದವರು (ದೇಶದವರು) ಸಂಯಮ ತೋರುವಂತೆ ಅಫ್ಘಾನಿಸ್ತಾನ ಕರೆ ನೀಡುತ್ತದೆ. ಹಿಂಸಾಚಾರವನ್ನು ತೀವ್ರಗೊಳಿಸುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು’ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಹಾಗೆಯೇ, ‘ ಅಫ್ಘಾನಿಸ್ತಾನ ವು, ತನ್ನ ತಟಸ್ಥ ವಿದೇಶಾಂಗ ನೀತಿಗೆ ಅನುಗುಣವಾಗಿ ಮಾತುಕತೆ ಮತ್ತು ಶಾಂತಿಯುತ ವಿಧಾನಗಳ ಮೂಲಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವಂತೆ ಎರಡೂ ದೇಶಗಳಿಗೆ ಕರೆ ನೀಡುತ್ತದೆ. ಸಂಘರ್ಷದಲ್ಲಿ ಭಾಗಿಯಾಗಿರುವ ಎರಡೂ ಪಕ್ಷದವರು (ದೇಶದವರು), ಅಫ್ಘಾನಿಸ್ತಾನ ದ ವಿದ್ಯಾರ್ಥಿಗಳು ಮತ್ತು ನಾಗರಿಕರ ಜೀವಗಳನ್ನು ರಕ್ಷಿಸುವುದರತ್ತ ಗಮನಹರಿಸಬೇಕು’ ಎಂದೂ ಒತ್ತಾಯಿಸಿದೆ.
20 ವರ್ಷಗಳಿಂದ ಅಫ್ಘಾನಿಸ್ತಾನ ದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತಮ್ಮ ಸೇನಾ ಪಡೆಗಳನ್ನು ಅಮೆರಿಕ ಮತ್ತು ನ್ಯಾಟೊ 2021ರಲ್ಲಿ ವಾಪಸ್ ಕರೆಸಿಕೊಂಡವು.