ಕೀವ್ : ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸುತ್ತಿದ್ದಂತೆಯೇ ಉಕ್ರೇನ್ ಪ್ರಜೆಗಳು ಮತ್ತು ಉಕ್ರೇನ್‌ನಲ್ಲಿ ಶಿಕ್ಷಣ, ಉದ್ಯೋಗ ನಿಮಿತ್ತ ನೆಲೆಸಿದ್ದ ಸಹಸ್ರಾರು ವಿದೇಶಿ ಪ್ರಜೆಗಳು ತಮ್ಮ ಜೀವ ಉಳಿಸಿಕೊಳ್ಳಲು ವಲಸೆ ಆರಂಭಿಸಿದ್ದಾರೆ.
ಎರಡನೆಯ ಮಹಾಯುದ್ಧದ ಬಳಿಕ ಯುರೋಪಿನಲ್ಲಿ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದ ಮೇಲೆ ನಡೆಸಿದ ಅತಿದೊಡ್ಡ ದಾಳಿಯಾಗಿದೆ. ಇದೀಗ 44 ದಶಲಕ್ಷ ಜನಸಂಖ್ಯೆ ಹೊಂದಿರುವ ಉಕ್ರೇನ್ ನ ಹಲವು ಜನರು ನೆಲೆ ಕಳೆದುಕೊಂಡು ಮಧ್ಯ ಯುರೋಪ್ ರಾಷ್ಟ್ರಗಳತ್ತ ವಲಸೆ ಆರಂಭಿಸಿದ್ದಾರೆ.
ಉಕ್ರೇನ್‌ಗೆ ಹೊಂದಿಕೊಂಡಿರುವ ನ್ಯಾಟೊ ರಾಷ್ಟ್ರಗಳು ನಿರಾಶ್ರಿತರಿಗೆ ಪ್ರವೇಶ ನೀಡಲು ಗಡಿಯಲ್ಲಿ ಸ್ವಾಗತ ಕೇಂದ್ರಗಳನ್ನು ತೆರೆದಿವೆ.
ಪೋಲೆಂಡ್, ಹಂಗೇರಿ, ಸ್ಲೊವಾಕಿಯಾ ಹಾಗೂ ರೊಮೆನಿಯಾ ದೇಶಗಳು ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಮತ್ತು ಅಗತ್ಯ ಆರೋಗ್ಯ ಸೇವೆ ಒದಗಿಸಲು ವ್ಯವಸ್ಥೆ ಮಾಡಿಕೊಂಡಿವೆ.
ಉಕ್ರೇನ್‌ನಲ್ಲಿ ಯುದ್ಧದಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಪೋಲೆಂಡ್ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ರೈಲು ಮತ್ತು ಗಾಯಾಳುಗಳನ್ನು ದಾಖಲಿಸಿಕೊಳ್ಳಲು 1,230 ಆಸ್ಪತ್ರೆಗಳನ್ನು ಸಜ್ಜುಗೊಳಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಉಕ್ರೇನ್‌ನಿಂದ 10 ಲಕ್ಷ ನಿರಾಶ್ರಿತರು ಯುರೋಪ್ ರಾಷ್ಟ್ರಗಳಿಗೆ ವಲಸೆ ಬರಲಿದ್ದಾರೆ ಎಂದು ಅಂದಾಜಿಸಿರುವ ಜರ್ಮನಿ, ಉಕ್ರೇನ್ ಗಡಿಯಲ್ಲಿರುವ ದೇಶಗಳಿಗೆ ನೆರವಿನ ಹಸ್ತವನ್ನು ಚಾಚಿದೆ. ಬಲ್ಗೇರಿಯಾ, ರೊಮೆನಿಯಾ, ಹಂಗೇರಿ ಕೂಡ ತಮ್ಮ ಗಡಿಗಳನ್ನು ಉಕ್ರೇನ್ ನಿರಾಶ್ರಿತರಿಗೆ ತೆರೆದಿವೆ.