ಚಿತ್ರದುರ್ಗ: ಹೋಟೆಲ್ ಉದ್ಯಮಿಯೊಬ್ಬರ ಮಗ ಹಾಗೂ ಅಳಿಯನನ್ನು ಒತ್ತೆಯಾಳಾಗಿಟ್ಟುಕೊಂಡು ಪಿಸ್ತೂಲ್ ಮತ್ತು ಮಾರಕಾಸ್ತ್ರ ತೋರಿಸಿ 50 ಲಕ್ಷ ರೂ. ದೋಚಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗದ ಬ್ಯಾಂಕ್ ಕಾಲೋನಿಯ ಉದ್ಯಮಿ ನಜೀರ್ ಅಹಮ್ಮದ್ ಎಂಬವರ ಮನೆಗೆ ಮೂವರು ದರೋಡೆಕೋರರು ನುಗ್ಗಿದ್ದಾರೆ. ನಜೀರ್ ಅವರ ಮಗ ಸಮೀರ್ ಹಾಗೂ ಅಳಿಯ ಶಹನಾಜ್ ಅವರಿಗೆ ಪಿಸ್ತೂಲ್ ತೋರಿಸಿ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಬಳಿಕ 50 ಲಕ್ಷ ರೂ. ನಗದು, 120 ಗ್ರಾಂ ಚಿನ್ನ ಮತ್ತು ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದಾರೆ.
ದರೋಡೆ ವೇಳೆ ಮನೆಯ ಸದಸ್ಯರನ್ನೆಲ್ಲ ತಂತಿಯಿಂದ ಕಟ್ಟಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಅವರಿಂದಲೇ ಚಹಾ ಮಾಡಿಸಿಕೊಂಡು ಕುಡಿದು ಹೋಗಿದ್ದಾರೆ. ನಜೀರ್ ಅವರನ್ನು ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ್ದಾರೆ. ಈ ವೇಳೆ ಏನಾದರೂ ಉಪಾಯ ಮಾಡಿದರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೂರ್ವ ವಲಯ ಐಜಿ ತ್ಯಾಗರಾಜ್ ಹಾಗೂ ಚಿತ್ರದುರ್ಗ ಎಸ್ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಬಡಾವಣೆ ಠಾಣೆ ಸಿಪಿಐ ನಯೂಮ್ ಹಾಗೂ ನಗರ ಠಾಣೆ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದ ತಂಡ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.