ಬೆಂಗಳೂರು: ಅಪರಾಧ ಕೃತ್ಯದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾದ 21 ದಿನಗಳಲ್ಲೇ ಮತ್ತೆ ಕಳ್ಳತನಕ್ಕೆ ಇಳಿದ ರೌಡಿ ಸೇರಿ ಇಬ್ಬರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶೂಟರ್ ಸಲ್ಮಾನ್ ಮತ್ತು ನವಾಜ್ ಬಂಧಿತ ಆರೋಪಿಗಳಾಗಿದ್ದು ಅವರಿಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಆರೋಪಿಗಳು ಸದಾಶಿವನಗರದ ಮುನಿರಾಜು ಅವರ ಕಾರನ್ನು ಕಳ್ಳತನ ಮಾಡಲು ಬಂದಿದ್ದು, ಎರಡು ಕಾರಿನ ಗಾಜು ಒಡೆದು ಸ್ಟೀಯರಿಂಗ್ ಬಾಕ್ಸ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮುನಿರಾಜು ಕಾರು ಕದಿಯಲು ಬಂದಿರುವುದು ಗೊತ್ತಾಗಿ ಸಹಾಯಕ್ಕಾಗಿ ಕಿರುಚಿದ್ದು, ಸ್ಥಳೀಯರು ಸಹಾಯಕ್ಕೆ ಬಂದಿದ್ದಾರೆ.
ಸ್ಥಳೀಯರನ್ನ ನೋಡಿ ಬೈಕ್ ಬಿಟ್ಟು ಕಾಂಪೌಂಡ್ ಹಾರಿ ಪರಾರಿಯಾಗಲು ಪ್ರಯತ್ನಿಸಿದ್ದ ಆರೋಪಿಗಳು, ಆಯತಪ್ಪಿ ಬಿದ್ದು ಸ್ಥಳೀಯರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಶೂಟರ್ ಸಲ್ಮಾನ್ ವಿರುದ್ಧ ಕೊಲೆ, ಕೊಲೆಯತ್ನ, ಕಿಡ್ನಾಪ್, ರಾಬರಿ ಸೇರಿದಂತೆ 11 ಪ್ರಕರಣಗಳು ದಾಖಲಾಗಿವೆ.
ಮತ್ತೊಬ್ಬ ಆರೋಪಿ ಮೆಹಬೂಬ್ ಉಮರ್ ಭಾರತಿನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು ಪ್ರಕರಣ ದಾಖಲಿಸಿರುವ ಸದಾಶಿವನಗರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.