ಮಂಗಳೂರು: ನಗರ ಹೊರವಲಯದ ಕಾಟಿಪಳ್ಳದ ರೌಡಿಶೀಟರ್ ಪಿಂಕಿ ನವಾಝ್ ಕೊಲೆಯತ್ನಕ್ಕೆ ಸಂಬಂಧಿಸಿ 9 ಮಂದಿ ಆರೋಪಿಗಳನ್ನು ಸುರತ್ಕಲ್ ಹಾಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಟಿಪಳ್ಳ ಕೃಷ್ಣಾಪುರ ನಿವಾಸಿಗಳಾದ ಪ್ರಕಾಶ್ ಭಂಡಾರಿ (29), ಶಾಕೀಬ್ (29) ಶೈಲೇಶ್ ಪೂಜಾರಿ (19), ಲಕ್ಷ್ಮೀಶ್ (26), ಸುವಿನ್ ಕಾಂಚನ್ (23), ನಿಸಾರ್ ಹುಸೈನ್ (29), ಅಹ್ಮದ್ ಸಾದಿಕ್ (23), ರಂಜನ್ ಶೆಟ್ಟಿ (24), ಹನೀಫ್ (20) ಬಂಧಿತ ಆರೋಪಿಗಳಾಗಿದ್ದಾರೆ.
ಫೆ.10ರಂದು ಸಂಜೆ ಕಾಟಿಪಳ್ಳದ 2ನೇ ಬ್ಲಾಕ್ನಲ್ಲಿರುವ ಟಿಕ್ಟಾಕ್ ಗಾರ್ಡನ್ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪಿಂಕಿ ನವಾಝ್ ನನ್ನು ಮಾರಕಾಸ್ತ್ರದಿಂದ ಕಡಿದು ಕೊಲೆ ಮಾಡಲು ವಿಫಲ ಯತ್ನ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಸುರತ್ಕಲ್ ಪೊಲೀಸರು ಕೊಲೆಯತ್ನ ನಡೆಸಿದ ಆರೋಪದಲ್ಲಿ ನಾಲ್ವರು ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಐವರನ್ನು ಬಂಧಿಸಿ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಹಳೆ ದ್ವೇಷದಿಂದಲೇ ಕೃತ್ಯ ನಡೆಸಲು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಎಂಟು ಮಂದಿಯ ವಿರುದ್ಧ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಠಾಣೆಗಳಲ್ಲಿ ಹಲವು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.