ಬೆಂಗಳೂರು : ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿ ಇಂದು ನಗರದ ಮೌರ್ಯ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಕುರುಬ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ, ಕುರುಬ ಸಮಾಜದ ಕುಲಶಾಸ್ತ್ರ ಅಧ್ಯಯನವನ್ನು ಸರಕಾರ ಕೂಡಲೇ ತರಿಸಿಕೊಳ್ಳಬೇಕು, ಜಾತಿ ಜನಗಣತಿ ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕು, ಕುರುಬರಿಗೆ ಎಸ್ ಟಿ ಮೀಸಲಾತಿ ನೀಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ರಾಜ್ಯದಲ್ಲಿ ಮುಂದುವರೆದ ಜಾತಿಗಳಿಗೆ ಎಸ್ ಟಿ ಮೀಸಲಾತಿ ನೀಡಬಾರದು ಎಂದು ಒತ್ತಾಯಿಸಿದರು.
ಯಡಿಯೂರಪ್ಪನವರೇ ಕುರುಬರನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. 11 ಕ್ಷೇತ್ರಗಳಲ್ಲಿ ನಾವೇ ನಿರ್ಣಾಯಕ ಮತದಾರರು. ರಾಜ್ಯದಲ್ಲಿ ಸುಮಾರು 60 ಲಕ್ಷ ಕುರುಬರ ಪರವಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷರು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಘೋಷಣೆಗಳು ಕೇಳಿಬಂದವು.