ಇಂದೋರ್: ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ 49 ರನ್‌ಗಳ ಅಂತರದಲ್ಲಿ ಹರಿಣಗಳಿಗೆ ಶರಣಾಗಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದ ರೋಹಿತ್ ಶರ್ಮಾ ಬಳಗ, ಈ ಮೂಲಕ 2-1 ಅಂತರದಲ್ಲಿ ಇದೇ ಮೊದಲ ಬಾರಿಗೆ, ತಾಯ್ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ, ರಿಲೀ ರೊಸೊವ್ ಗಳಿಸಿದ ಚೊಚ್ಚಲ ಶತಕದ ನೆರವಿನಿಂದ 3 ವಿಕೆಟ್ ನಷ್ಟದಲ್ಲಿ 227 ರನ್‌ಗಳಿಸಿತ್ತು. ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ, 18.3 ಓವರ್‌ಗಳಲ್ಲಿ 178 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
21 ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 46 ರನ್‌ಗಳಿಸಿ ಟಾಪ್ ಸ್ಕೋರರ್ ಎನಿಸಿದರು. ಉಳಿದಂತೆ ದೀಪಕ್ ಚಾಹರ್ 31 ರನ್ (17 ಎಸೆತ 4×2, 6×3), ರಿಷಭ್ ಪಂತ್ 27 ರನ್‌ಗಳಿಸಿದರು. ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರೆ, 5 ಮಂದಿ ಎರಡಂಕಿಯ ಮೊತ್ತವನ್ನೇ ದಾಟಲಿಲ್ಲ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ್ದ ರಿಲೀ ರೊಸೊವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ದಕ್ಷಿಣ ಆಫ್ರಿಕಾ 227/3
ಇದಕ್ಕೂ ಮೊದಲು ಟಾಸ್ ಸೋತರೂ ತಲೆಕೆಡಿಸಿಕೊಳ್ಳದ ಪ್ರವಾಸಿ ತಂಡ, ಭರ್ಜರಿ ಬ್ಯಾಟಿಂಗ್ ನಡೆಸಿತ್ತು. ಇನ್ನಿಂಗ್ಸ್ ಆರಂಭಿಸಿದ ನಾಯಕ ತೆಂಬ ಬವುಮಾ, ಕಳಪೆ ಬ್ಯಾಟಿಂಗ್ ಪ್ರದರ್ಶನ ಈ ಪಂದ್ಯದಲ್ಲೂ (3 ರನ್) ಮುಂದುವರೆಯಿತು. ಆದರೆ ಕ್ವಿಂಟನ್ ಡಿ ಕಾಕ್ ಜೊತೆಗೂಡಿದ ರೊಸೊವ್ ಶತಕದ ಜೊತೆಯಾಟದಲ್ಲಿ ಭಾಗಿಯಾದರು.
ಕ್ವಿಂಟನ್ ಡಿ ಕಾಕ್ 68 ರನ್ ಗಳಿಸಿದ್ದ ವೇಳೆ (43 ಎಸೆತ, 4×6, 6×4) ರನೌಟ್‌ಗೆ ಬಲಿಯಾದರು. ಮತ್ತೊಂದು ತುದಿಯಲ್ಲಿ ಸಿಕ್ಸರ್‌ಗಳ ಮೂಲಕ ಅಬ್ಬರಿಸಿದ ರಿಲೀ ರೊಸೊವ್, ಭರ್ತಿ 100 ರನ್‌ಗಳಿಸಿ . (48 ಎಸೆತ, 4×7, 6×8 ) ಅಜೇಯರಾಗುಳಿದರು. ತಲಾ 4 ಓವರ್ ಎಸೆದ ದೀಪಕ್ ಚಾಹರ್ 48 ರನ್ ಮತ್ತು ಹರ್ಷಲ್ ಪಟೇಲ್ 49 ರನ್ ಬಿಟ್ಟುಕೊಟ್ಟು ದುಬಾರಿಯಾದರು.