ರಾಜ್‌ಕೋಟ್: ಕುಲ್ದೀಪ್ ಸೇನ್ ಬಿಗು ಬೌಲಿಂಗ್ ದಾಳಿ ಮತ್ತು ಅಭಿಮನ್ಯು ಈಶ್ವರನ್ ಗಳಿಸಿದ ಅಜೇಯ ಅರ್ಧಶತಕದ ನೆರವಿನಿಂದ, ಸೌರಾಷ್ಟ್ರ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ ರೆಸ್ಟ್ ಆಫ್ ಇಂಡಿಯಾ ಇರಾನಿ ಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಜಯದೇವ್ ಉನದ್ಕತ್ ಸಾರಥ್ಯದ ಸೌರಾಷ್ಟ್ರ, ನಾಲ್ಕನೇ ದಿನ ಎರಡನೇ ಇನಿಂಗ್ಸ್‌ನಲ್ಲಿ 380 ರನ್‌ಗಳಿಗೆ ಆಲೌಟ್ ಆಗಿತ್ತು. 105 ರನ್‌ಗಳ ಸುಲಭ ಗುರಿ ಹಿಂಬಾಲಿಸಿದ ಹನುಮಾ ವಿಹಾರಿ ನೇತೃತ್ವದ ರೆಸ್ಟ್ ಆಫ್ ಇಂಡಿಯಾ, 31.2 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಭರ್ಜರಿ ಗೆಲುವು ದಾಖಲಿಸಿತು. ರೆಸ್ಟ್ ಆಫ್ ಇಂಡಿಯಾ ಪರ ಅಭಿಮನ್ಯು ಈಶ್ವರನ್ ಅಜೇಯ 63 ರನ್ ಗಳಿಸಿದರೆ, ಕೆಎಸ್ ಭರತ್(27 ರನ್‌ಗಳಿಸಿ ಅಜೇಯರಾಗುಳಿದರು. ಮುರಿಯದ ಮೂರನೇ ವಿಕೆಟ್‌ಗೆ ಈ ಜೋಡಿ 81 ರನ್‌ಗಳ ಜೊತೆಯಾಟವಾಡಿತು.
ಇದಕ್ಕೂ ಮೊದಲು 8 ವಿಕೆಟ್ ನಷ್ಟದದಲ್ಲಿ 368ರನ್‌ಗಳಿಂದ ಮಂಗಳವಾರ ಆಟ ಮುಂದುವರಿಸಿದ್ದ ಸೌರಾಷ್ಟ್ರ 380ರನ್‌ಗಳಿಗೆ ಆಲೌಟ್ ಆಗಿತ್ತು. ರೆಸ್ಟ್ ಆಫ್ ಇಂಡಿಯಾ ಪರ ಕುಲ್ದೀಪ್ ಸೆನ್ 5 ವಿಕೆಟ್ ಪಡೆದರೆ, ಸೌರಭ್ ಕುಮಾರ್ 3 ವಿಕೆಟ್ ಪಡೆದರು. ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 5 ವಿಕೆಟ್ ಕಬಳಿಸಿದ್ದ ರೆಸ್ಟ್ ಆಫ್ ಇಂಡಿಯಾದ ಮುಖೇಶ್ ಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಹೋರಾಟದ ಬ್ಯಾಟಿಂಗ್ ಪ್ರದರ್ಶಿಸಿದರೂ, ಮೊದಲ ಇನ್ನಿಂಗ್ಸ್‌ನಲ್ಲಿ 98 ರನ್‌ಗಳಿಗೆ ಆಲೌಟ್ ಆಗಿದ್ದು ಸೌರಾಷ್ಟ್ರಕ್ಕೆ ಹಿನ್ನಡೆಯಾಯಿತು,. ಮೊದಲ ಇನಿಂಗ್ಸ್‌ನಂತೆ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಸೌರಾಷ್ಟ್ರ ತಂಡದ ಅಗ್ರ ಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಅರ್ಪಿತ್ ವಸಾವಾಡ 55 ರನ್, ಪ್ರೇರಕ್ ಮಂಕಡ್ 72 ರನ್, ಶೆಲ್ಡನ್ ಜಾಕ್ಸನ್ 71 ರನ್ ಹಾಗೂ ನಾಯಕ ಜಯದೇವ್ ಉನಾದ್ಕಟ್ 89 ರನ್ ಗಳಿಸಿ, ತಂಡದ ಮೊತ್ತವನ್ನು 380ರನ್ ತಲುಪಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಸೌರಾಷ್ಟ್ರ 98, ರೆಸ್ಟ್ ಆಫ್ ಇಂಡಿಯಾ 110 ಓವರ್‌ಗಳಲ್ಲಿ 374. ಎರಡನೇ ಇನಿಂಗ್ಸ್; ಸೌರಾಷ್ಟ್ರ 380ರನ್‌ಗಳಿಗೆ ಆಲೌಟ್ (ಶೆಲ್ಡನ್ ಜಾಕ್ಸನ್ 71, ಅರ್ಪಿತ್ ವಾಸವದ 55, ಪ್ರೇರಕ್ ಮಂಕಡ್ 72, ಜಯದೇವ್ ಉನದ್ಕತ್ 89, ಕುಲದೀಪ್ ಸೇನ್ 94ಕ್ಕೆ 5, ಸೌರಭ್ ಕುಮಾರ್ 80ಕ್ಕೆ 3)