Home ಟಾಪ್ ಸುದ್ದಿಗಳು ರಿಯಾದ್: ಆರು ಗಿನ್ನೆಸ್ ದಾಖಲೆ ಬರೆದ ಅಂತಾರಾಷ್ಟ್ರೀಯ ಖುರ್‌ಆನ್ ಪಠಣ, ಆಝಾನ್ ಕರೆ ಸ್ಪರ್ಧೆ!

ರಿಯಾದ್: ಆರು ಗಿನ್ನೆಸ್ ದಾಖಲೆ ಬರೆದ ಅಂತಾರಾಷ್ಟ್ರೀಯ ಖುರ್‌ಆನ್ ಪಠಣ, ಆಝಾನ್ ಕರೆ ಸ್ಪರ್ಧೆ!

ರಿಯಾದ್: ಆರು ಗಿನ್ನೆಸ್ ದಾಖಲೆಗಳನ್ನು ನಿರ್ಮಿಸುವ ಮೂಲಕ ಅಂತಾರಾಷ್ಟ್ರೀಯ ಖುರ್‌ಆನ್ ಪಠಣ ಮತ್ತು ಆಝಾನ್ ಕರೆ ಸ್ಪರ್ಧೆ ರಿಯಾದ್‌ನಲ್ಲಿ ಸಂಪನ್ನಗೊಂಡಿತು. ಜನರಲ್ ಎಂಟರ್‌ಟೈನ್ಮೆಂಟ್ ಅಥಾರಿಟಿ ಅಧ್ಯಕ್ಷ ತುರ್ಕಿ ಆಲುಶೇಖ್ ವಿಜೇತರಿಗೆ ನಗದು ಬಹುಮಾನ ವಿತರಿಸಿದರು.

ಖುರ್‌ಆನ್ ಪಠಣ ವಿಭಾಗದಲ್ಲಿ ಇರಾನ್‌ನ ಸ್ಪರ್ಧಿ ಯೂನಸ್ ಶಾಹಂರಾದಿ ಮತ್ತು ಆಝಾನ್ ಕರೆ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾದ ಮೊಹಮ್ಮದ್ ಆಲುಶರೀಫ್ ಪ್ರಥಮ ಸ್ಥಾನ ಪಡೆದರು.

ವಿಜೇತರಿಬ್ಬರಿಗೂ ತಲಾ 30 ಲಕ್ಷ ರಿಯಾಲ್ ಮತ್ತು 20 ಲಕ್ಷ ರಿಯಾಲ್ ನಗದು ನೀಡಿ ಗೌರವಿಸಲಾಯಿತು.

ಖುರ್‌ಆನ್ ಪಠಣ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾದ ಸ್ಪರ್ಧಿ ಅಬ್ದುಲ್ ಅಝೀಝ್ ಅಲ್ ಫಾಕಿಹ್ ದ್ವಿತೀಯ ಸ್ಥಾನ ಪಡೆದು 20 ಲಕ್ಷ ರಿಯಾಲ್ ನಗದು ಬಹುಮಾನ ಪಡೆದರು.

ಮೊರಾಕ್ಕೋದ ಸ್ಪರ್ಧಿ ಝಕರಿಯಾ ಅಲ್ಸೆರ್ಕ್ ಮೂರನೇ ಸ್ಥಾನವನ್ನು ಗೆದ್ದು 10 ಲಕ್ಷ ರಿಯಾಲ್‌ಗಳನ್ನು ಪಡೆದರೆ, ಮೊರಾಕ್ಕೋದವರೇ ಆದ ಅಬ್ದುಲ್ಲಾ ಅಲ್ದಿ ನಾಲ್ಕನೇ ಸ್ಥಾನ ಪಡೆದು 7 ಲಕ್ಷ ರಿಯಾಲ್‌ಗಳ ನಗದು ಬಹುಮಾನ ಪಡೆದರು.

ಆಝಾನ್ ಕರೆ ಸ್ಪರ್ಧೆಯಲ್ಲಿ ಇಂಡೋನೇಷ್ಯಾದ ದಿಯಾವುದ್ದೀನ್ ಬಿನ್ ನಿಸಾರುದ್ದೀನ್ ದ್ವಿತೀಯ ಸ್ಥಾನ ಪಡೆದರು. ಎರಡನೇ ಸ್ಥಾನಕ್ಕೆ 10 ಲಕ್ಷ ರಿಯಾಲ್ ನಗದು ಬಹುಮಾನ ಲಭಿಸಿದವು. ತೃತೀಯ ಸ್ಥಾನ ಪಡೆದ ರಹೀಫ್ ಅಲ್ಹಾಜ್ 5 ಲಕ್ಷ ರಿಯಾಲ್ ಮತ್ತು 4ನೇ ಸ್ಥಾನ ಪಡೆದ ಬ್ರಿಟಿಷ್ ಸ್ಪರ್ಧಿ ಇಬ್ರಾಹಿಂ ಅಸದ್ 3 ಲಕ್ಷ ರಿಯಾಲ್ ನಗದು ಬಹುಮಾನ ಪಡೆದರು.

ಈ ಬಾರಿ 165 ದೇಶಗಳಿಂದ 50 ಸಾವಿರಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದರು. ಕಳೆದ ವರ್ಷ 80 ದೇಶಗಳಿಂದ 40,000 ಮಂದಿ ನೋಂದಣಿ ಮಾಡಿಕೊಂಡಿದ್ದರು.

ಸೌದಿ ಜನರಲ್ ಎಂಟರ್‌ಟೈನ್‌ಮೆಂಟ್ ಅಥಾರಿಟಿ ಆಯೋಜಿಸಿದ್ದ ಎರಡನೇ ಅಂತಾರಾಷ್ಟ್ರೀಯ ಖುರ್‌ಆನ್ ಪಠಣ ಮತ್ತು ಆಝಾನ್ ಕರೆ ಸ್ಪರ್ಧೆಗಳು ನಿನ್ನೆ(ಶುಕ್ರವಾರ) ಸಂಜೆ ಮುಕ್ತಾಯಗೊಂಡವು.

ಅತೀ ಹೆಚ್ಚು ಮಂದಿ ಭಾಗವಹಿಸಿದ ಖುರ್‌ಆನ್ ಪಠಣ ಸ್ಪರ್ಧೆ, ಅತೀ ಹೆಚ್ಚು ಜನರು ಭಾಗವಹಿಸಿದ ಆಝಾನ್ ಕರೆ ಸ್ಪರ್ಧೆ, ಅತೀ ಹೆಚ್ಚು ನಗದು ಬಹುಮಾನ ನೀಡಿದ ಖುರ್‌ಆನ್ ಪಠಣ ಸ್ಪರ್ಧೆ, ಅತೀ ಹೆಚ್ಚು ನಗದು ಬಹುಮಾನ ನೀಡಿದ ಆಝಾನ್ ಕರೆ ಸ್ಪರ್ಧೆ, ಅತೀ ಹೆಚ್ಚು ದೇಶಗಳು ಭಾಗವಹಿಸಿದ ಖುರ್‌ಆನ್ ಪಠಣ ಸ್ಪರ್ಧೆ, ಅತೀ ಹೆಚ್ಚು ದೇಶಗಳು ಭಾಗವಹಿಸಿದ ಆಝಾನ್ ಕರೆ ಸ್ಪರ್ಧೆ ಹೀಗೆ ಆರು ದಾಖಲೆಗಳು ಈ ಬಾರಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿಕೊಂಡಿದೆ

Join Whatsapp
Exit mobile version