Home ಟಾಪ್ ಸುದ್ದಿಗಳು ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಕುತ್ತಿಗೆಗೆ ಇರಿದ ಅಪ್ರಾಪ್ತೆ

ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಕುತ್ತಿಗೆಗೆ ಇರಿದ ಅಪ್ರಾಪ್ತೆ

ಹಾವೇರಿ: ಪ್ರೀತಿಸಿದ ಹುಡುಗನನ್ನು ಬಿಟ್ಟು ಮನೆಯವರ ಒತ್ತಾಯಕ್ಕಾಗಿ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ 17 ವರ್ಷದ ಬಾಲಕಿಯೊಬ್ಬಳು, ನಿಶ್ಚಿತಾರ್ಥ ಮಾಡಿಕೊಂಡ ಯುವಕನನ್ನು ಉಪಾಯದಿಂದ ಕಣ್ಣು ಮುಚ್ಚಿಸಿ ಆತನ ಕುತ್ತಿಗೆಗೆ ಚಾಕು ಇರಿದ ಘಟನೆ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ನಡೆದಿದೆ.


ಅಪ್ರಾಪ್ತ ಬಾಲಕಿ ತನ್ನ ಭಾವಿ ಪತಿಯನ್ನು ಪಾರ್ಕ್ಗೆ ಬರುವಂತೆ ಕೋರಿಕೊಂಡಿದ್ದಾಳೆ. “ನಿನಗೊಂದು ಉಡುಗೊರೆ ಕೊಡಬೇಕು, ರೀಲ್ಸ್ ಮಾಡೋಣ, ನಿನ್ನ ಕೈ ಕಟ್ಟಿ ಪೋಟೊ ತೆಗೆಯುತ್ತೇನೆ” ಎಂದು ಯುವಕನನ್ನು ನಂಬಿಸಿದ್ದಾಳೆ. ಯುವಕ ಕೂಡ ತನ್ನ ಭಾವಿ ಪತ್ನಿ ಪ್ರೀತಿಯಿಂದ ಹೇಳುತ್ತಿದ್ದಾಳೆ ಎಂದೇ ಆಕೆಯ ಮನವಿಗೆ ಒಪ್ಪಿಕೊಂಡಿದ್ದಾನೆ.
ಪಾರ್ಕ್’ಗೆ ಹೋದ ಯುವಕನಿಗೆ, ನಿನಗೊಂದು ಗಿಫ್ಟ್ ಕೊಡುತ್ತೇನೆ, ಕಣ್ಣು ಮುಚ್ಚಿ ಕೈಯನ್ನು ಹಿಂದಕ್ಕೆ ಕಟ್ಟುವಂತೆ ಬಾಲಕಿ ಹೇಳಿದ್ದಾಳೆ
ಅದರಂತೆ ಶಿಲುಬೆ ಥರ ಕೈ ಕಟ್ಟಿಸಿಕೊಂಡಿದ್ದ ಯುವಕನಿಗೆ ‘ ನೋಡು ನನ್ನ ಗಿಫ್ಟ್ ಎಂದು ದೇವೆಂದ್ರಗೌಡ ಎಂಬ ಯುವಕನ ಕುತ್ತಿಗೆಗೆ 17 ವರ್ಷದ ಅಪ್ರಾಪ್ತ ಬಾಲಕಿ ಚೂರಿಯಿಂದ ಇರಿದಿದ್ದಾಳೆ.
ನೋವಿನಿಂದ ಕಣ್ಣು ಬಿಟ್ಟು ನೋಡಿದಾಗ ತನ್ನ ಭಾವಿ ಪತ್ನಿಯೇ ಚಾಕು ಹಿಡಿದು ನಿಂತಿರುವುದು ಕಂಡಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಇನ್ನು ದೇವೆಂದ್ರಗೌಡ ಯುವಕ ಹರಪನಹಳ್ಳಿ ತಾಲೂಕಿನಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ, ಮಾರ್ಚ್ 3 ರಂದು ಅಪ್ರಾಪ್ತ ಬಾಲಕಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಆದರೀಗ ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದವನನ್ನೇ ಕೊಲ್ಲಲು ಯತ್ನಿಸಿದ ಈ ಖತರ್ನಾಕ್ ಬಾಲಕಿಯ ಕೃತ್ಯಕ್ಕೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಯುವಕನ ಪೋಷಕರು ಅಪ್ರಾಪ್ತ ಬಾಲಕಿಯ ವಿರುದ್ಧ ದೂರು ನೀಡಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನೆಲೆ ಆರೋಪಿ ಬಾಲಕಿಯನ್ನು ಬಂಧಿಸಲಾಗಿದೆ.
ಈ ಕುರಿತು ಹಲಗೇರಿ ಠಾಣಾ ಪೋಲಿಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp
Exit mobile version