Home ಟಾಪ್ ಸುದ್ದಿಗಳು ಶಾಸಕರಿಗೆ ಬಲಪಂಥೀಯರಿಂದ ಪ್ರೇರಣಾ ತರಗತಿ ಆಯೋಜನೆ: ಸ್ಪೀಕರ್ ಖಾದರ್ ವಿರುದ್ಧ ವ್ಯಾಪಕ ಆಕ್ರೋಶ

ಶಾಸಕರಿಗೆ ಬಲಪಂಥೀಯರಿಂದ ಪ್ರೇರಣಾ ತರಗತಿ ಆಯೋಜನೆ: ಸ್ಪೀಕರ್ ಖಾದರ್ ವಿರುದ್ಧ ವ್ಯಾಪಕ ಆಕ್ರೋಶ

ಬೆಂಗಳೂರು: ವಿಧಾನಸಭೆಗೆ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ 70 ಶಾಸಕರಿಗೆ ಬಲಪಂಥೀಯರಿಂದ ಪ್ರೇರಣಾ ತರಗತಿ ಆಯೋಜನೆ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು, ಯು.ಟಿ ಖಾದರ್ ಬೆಂಬಲಿಗರು, ನಾಡಿನ ಹಲವು ಚಿಂತಕರು, ಗಣ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


16ನೇ ವಿಧಾನಸಭೆಗೆ ಆಯ್ಕೆಯಾಗಿರುವ 70 ಹೊಸ ಶಾಸಕರಿಗೆ 3 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಮತ್ತು ವಿಧಾನಸಭೆಯ ನಡಾವಳಿ ಕುರಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು. ಟಿ. ಖಾದರ್ ತಿಳಿಸಿದ್ದಾರೆ.


ನೂತನ ಶಾಸಕರಿಗೆ ಪ್ರೇರಣೆ ನೀಡಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ , ಡಾ. ಗುರುರಾಜ ಕರಜಗಿ, ಹಾಗೂ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಮೋಟಿವೇಷನ್ ಭಾಷಣ ಮಾಡಲಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


ಬಲಪಂಥೀಯ ಭಾಷಣಕಾರರ ಕುರಿತಂತೆ ನಾಡಿನ ಗಣ್ಯರ ಆಕ್ಷೇಪ
ಇಂತಹ ಒಂದು ಐಡಿಯಾ ಕೊಟ್ಟ ಅಯೋಗ್ಯರು ಯಾರು? ಬರೀ ನೆಗೆಟಿವ್ ಎನರ್ಜಿ ತುಂಬಿಕೊಂಡಿರುವ ಮತ್ತು ಪಕ್ಕಾ ಕಾರ್ಪೊರೇಟ್ ಸಂಗಿ ಮನಸ್ತಿತಿಯ ಜನಗಳಿಂದ ಎಂತ ಪ್ರೇರಣೆ? ಒಬ್ಬ ಸೌಜನ್ಯಗೆ ನ್ಯಾಯ ಕೊಡಿಸಲಾಗದ ಅತ್ಯಂತ ದುರ್ಬಲ ಮನಸಿನ ವೀರೇಂದ್ರ ಹೆಗ್ಗಡೆ, ಸನಾತನಿ ರಿಯಲ್ ಎಸ್ಟೇಟ್ ಕದೀಮ ರವಿಶಂಕರ, ಇತ್ತೀಚೆಗಷ್ಟೇ ಕಾಂಗ್ರೆಸ್ ಗ್ಯಾರಂಟಿಗಳನ್ನು ಅಪಹಾಸ್ಯ ಮಾಡಿರುವ ಗುರುರಾಜ ಕರ್ಜಗಿ ಇವರಿಂದ ಜನಪ್ರತಿನಿದಿಗಳು ಪಡೆದುಕೊಳ್ಳುವ ತರಬೇತಿ ಪ್ರೇರಣೆಯಾದರೂ ಏನು? ಇದನ್ನು ಕೂಡಲೇ ಬದಲಿಸಬೇಕು… ಇಲ್ಲವಾದರೆ ಒಂದು ಕೆಟ್ಟ precedence ಗೆ ಕಾಂಗ್ರೆಸ್ ಸರ್ಕಾರವೇ ನಾಂದಿ ಹಾಡಿದಂತಾಗುತ್ತದೆ. ದಯವಿಟ್ಟು ಇಂತಹ ಅಸಹ್ಯ ಮಾಡಬೇಡಿ.

  • -ಹರ್ಷ ಕುಮಾರ್ ಕುಗ್ವೆ, ಪತ್ರಕರ್ತ

ಕುರಿಗಳನ್ನು ಕಾಯುವ ಪಾಠವನ್ನು ತೋಳಗಳು ಮಾಡುವವೇ?
ವ್ಯಕ್ತಿಯ ಸಮಗ್ರ ವ್ಯಕ್ತಿತ್ವದ ವಿಕಾಸಕ್ಕೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಬದ್ಧತೆಗೆ ಬೇಕಾಗಿರುವುದು ಧಾರ್ಮಿಕ ವ್ಯಕ್ತಿಗಳ ಮಾರ್ಗದರ್ಶನವಲ್ಲ.
ಧಾರ್ಮಿಕತೆಯನ್ನು, ಆಧ್ಯಾತ್ಮಿಕತೆಯನ್ನು ವಾಣಿಜ್ಯ ಮಾಡಿಕೊಂಡಿರುವವರಿಂದ, ಧಾರ್ಮಿಕತೆಯನ್ನು ಜನರ ದೌರ್ಬಲ್ಯವನ್ನಾಗಿಸಿ ತಮ್ಮ ಪ್ರಭಾವಶಾಲಿ ಐಶಾರಾಮಿ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿರುವವರಿಂದ, ತಮ್ಮ ಕ್ಷೇತ್ರದಲ್ಲಿ ಆಗುವ ಅಧರ್ಮ ಮತ್ತು ಅನ್ಯಾಯಗಳ ಬಗ್ಗೆ ಕೊಂಚವೂ ಸ್ಪಂದಿಸದೇ ಇರುವ ಧರ್ಮಾಧ್ಯಕ್ಷರುಗಳಿಂದ, ಶಿಕ್ಷಣವನ್ನು ವ್ಯಾಪಾರವನ್ನಾಗಿಸಿಕೊಂಡು ಬರಿಯ ಉಳ್ಳವರ ಮತ್ತು ಮೇಲ್ವರ್ಗದವರ ಪರವಾಗಿ ಚಂದವಾಗಿ, ಆಕರ್ಷಕವಾಗಿ ಭಾಷಣ ಮಾಡುತ್ತಿರುವವರಿಂದ ಈ ಸರ್ಕಾರ ಯಾವ ಪ್ರೇರಣೆಯನ್ನು ಪಡೆಯಬೇಕು?
ಖಂಡಿತವಾಗಿಯೂ ಪ್ರಸ್ತುತ ಮತ್ತು ಮುಂದಿನ ದಾರಿ ಮತ್ತು ಗುರಿಗಳ ಬಗ್ಗೆ ತಿಳಿಯಬೇಕಾಗಿರುವುದು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಬಗೆಯನ್ನು.
ನೂತನವಾಗಿ ಆಯ್ಕೆಯಾಗಿರುವ ಮತ್ತು ಹಳೆಯ ಶಾಸಕರಿಗೆ ಪ್ರೇರಣೆ ಸಿಗಬೇಕಾಗಿರುವುದು ಶಿಕ್ಷಣ, ಮನೋಬಲ, ಆರ್ಥಿಕ ಸ್ವಾವಲಂಬನೆ, ಉದ್ಯೋಗಾವಕಾಶ, ಕೈಗಾರಿಕ ಅಭಿವೃದ್ಧಿ, ಬಂಡವಾಳ ಹೂಡಿಕೆ, ಕಾನೂನು ಮತ್ತು ಸುವ್ಯವಸ್ಥೆ; ಇಂತವೆಲ್ಲಾ ಸಂವಿಧಾನದ ಆಶಯದಂತೆ ವ್ಯಕ್ತಿ, ಕುಟುಂಬ ಮತ್ತು ಸಮಾಜದ ಸಮಗ್ರ ವಿಕಾಸಕ್ಕೆ ಕಾಣ್ಕೆ ನೀಡುವಂತ ಮಾರ್ಗದರ್ಶನ ಬೇಕಾಗಿರುವುದು.
ಇವರ ಈ ಪ್ರೇರಣಾ ಕಾರ್ಯಾಗಾರದಿಂದ ಪ್ರೇರಿತವಾಗಿ ಪೋಲಿಸ್ ಇಲಾಖೆ ಭೂಗತ ಪಾತಕಿಗಳನ್ನು, ಖದೀಮರನ್ನು, ಸಮಾಜ ಘಾತುಕರನ್ನು ಮುಂದೊಂದು ದಿನ ಕರೆಯಿಸಿ ತಮ್ಮ ಕಾರ್ಯವೈಖರಿಗೆ ಪ್ರೇರಣೆಯನ್ನು ಬಯಸಬಹುದೇನೋ!
-ಯೋಗೇಶ್ ಮಾಸ್ಟರ್

ಸ್ಪೀಕರ್ ಯು ಟಿ ಖಾದರ್ ನೂತನ ಶಾಸಕರಿಗೆ ಏರ್ಪಡಿಸಿರುವ ಶಿಬಿರದಲ್ಲಿ ಪ್ರೇರಣಾ ಉಪನ್ಯಾಸ ನೀಡಲು ವಿಶ್ವ ಹಿಂದೂಪರಿಷತ್ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಧರ್ಮಸ್ಥಳದ ಡಾ. ವಿರೇಂದ್ರ ಹೆಗ್ಡೆ, ಕಾರ್ಪೊರೇಟ್ ಆಧ್ಯಾತ್ಮದ ವ್ಯಾಪಾರಿ ರವಿಶಂಕರ್ ಗುರೂಜಿ, ಜಮಾತೆ ಇಸ್ಲಾಮಿ ಹಿಂದ್ ನ ಮುಹಮ್ಮದ್ ಕುಂಞ, ಬಲಪಂಥೀಯ ಬರಹಗಾರ ಗುರುರಾಜ ಕರ್ಜಗಿಯವರನ್ನು ಆಯ್ಕೆ ಮಾಡಿದ್ದಾರೆ.
ಕೋಮುವಾದಿ ಸರಕಾರವನ್ನು ಸೋಲಿಸಲು ನಿಸ್ವಾರ್ಥವಾಗಿ ನಿರಂತರ ಶ್ರಮಿಸಿದ ನಾಡಿನ ಖ್ಯಾತನಾಮ ಸಾಹಿತಿಗಳೂ, ಉಪನ್ಯಾಸಕರೂ, ಬರಹಗಾರರೂ ಆದಂತಹ ದೇವನೂರ ಮಹಾದೇವ, ರಹಮತ್ ತರೀಕೆರೆ, ಜಸ್ಟೀಸ್ ನಾಗಮೋಹನ ದಾಸ್, ಪುರುಷೋತ್ತಮ ಬಿಳಿಮಲೆ, ಡಾ. ವಿಜಯಮ್ಮ, ಬರಗೂರು ರಮಾಚಂದ್ರಪ್ಪ, ಬಂಜಗೆರೆ ಜಯಪ್ರಕಾಶ ಮತ್ತಿತರರು ಇನ್ನು ಹಿಮಾಲಯಕ್ಕೆ ಹೊರಡುವುದು ಲೇಸು. ಅವರ ಮಾತುಗಳು “ಸೆಕ್ಯುಲರ್” ಸರಕಾರದ ಸಂದರ್ಭದಲ್ಲೂ ಪ್ರೇರಣೆ ಪಡೆಯುವಂತದ್ದಲ್ಲ, ಅದರ ಅಗತ್ಯ ಕರ್ನಾಟಕದ ಶಾಸಕರುಗಳಿಗೆ ಇಲ್ಲ ಎಂದು ಗೌರವಾನ್ವಿತ ಸ್ಪೀಕರ್ ರೂಲಿಂಗ್ ನೀಡಿದಂತಾಗಿದೆ.
-ಮುನೀರ್ ಕಾಟಿಪಳ್ಳ

Join Whatsapp
Exit mobile version