ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಎಲ್ಲಾ ಜವಾಬ್ದಾರಿಗಳಿಗೂ ರಾಜೀನಾಮೆ ನೀಡುತ್ತೇನೆ. ಆದರೆ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ಟಿಕೆಟ್ ಸಿಗದೆ ನಿರಾಸೆಗೊಳಗಾದ ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಕ್ರೀನಿಂಗ್ ಕಮಿಟಿವರೆಗೂ ನನ್ನ ಹೆಸರಿತ್ತು. ಅಜಯ್ ಕುಮಾರ್ ಸರ್ನಾಯಕ್ ಮತ್ತು ನನ್ನ ಹೆಸರಿಗೆ ಮಾತ್ರ ಬೆಂಬಲ ನೀಡಿದ್ದಾಗಿ ಜಿಲ್ಲೆಯ ಶಾಸಕರು ತಿಳಿಸಿದ್ದರು. ಆದರೆ ಹೈಕಮಾಂಡ್‌ನ ಸಭೆಗೆ ನನ್ನ ಹೆಸರು ಹೋಗಿಲ್ಲ. ಇದರ ಹಿಂದೆ ಷಡ್ಯಂತ್ರ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯದ ಹೆಣ್ಣುಮಗಳು ಪ್ರಬಲವಾಗಿ ಬೆಳೆಯುವುದನ್ನು ಕೆಲವರಿಗೆ ಸಹಿಸಿಕೊಳ್ಳಲಾಗಿಲ್ಲ. ಕಾಂಗ್ರೆಸ್‌ನ ಘೋಷಿತ ಅಭ್ಯರ್ಥಿ ಸಂಯುಕ್ತ ಪಾಟೀಲ್ ನೆರೆಯ ಬಿಜಾಪುರ ಜಿಲ್ಲೆಯವರು. ಆಕೆಯ ಗಂಡನ ಮನೆ ಬೀದರ್. ಅಲ್ಲಿಂದ ಬೇಕಾದರೆ ಸ್ಪರ್ಧಿಸಬಹುದಿತ್ತು. ಬಾಗಲಕೋಟೆಗೆ ಬಂದು ಸ್ಪರ್ಧೆ ಮಾಡುವ ಅಗತ್ಯ ಏನಿತ್ತು ಎಂದು ವೀಣಾ ಪ್ರಶ್ನಿಸಿದರು.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ವೀಣಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಲು ಯತ್ನಿಸಿ ಟಿಕೆಟ್ ದೊರೆಯದೆ ನಿರಾಸೆಯಾಗಿದ್ದಾರೆ.