ಬೀದರ್: ಜಿಲ್ಲೆಯಲ್ಲಿ ಓವರ್ ಟ್ಯಾಂಕ್‌ಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು,. ಇದನ್ನು ಅರಿಯದ ಜನರು ಅದೇ ನೀರನ್ನು 4-5 ದಿನಗಳ ಕಾಲ ಕುಡಿದಿದ್ದಾರೆ. ತೀವ್ರ ವಾಸನೆ ಬಳಿಕ ಓವರ್ ಟ್ಯಾಂಕ್ ಚೆಕ್ ಮಾಡಿದಾಗ ಯುವಕ ಶವ ಕಂಡ ಜನರು ಶಾಕ್ ಆಗಿದ್ದಾರೆ.
ಬೀದರ್ ತಾಲೂಕಿನ ಅಣದೂರು ಗ್ರಾಮದ ರಾಜಕುಮಾರ ದಾಸ ಓವರ್ ಟ್ಯಾಂಕ್ ಏರಿ ಅದರೊಳಗಿನ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಣದೂರು ಗ್ರಾಮಸ್ಥರು ಮಾತ್ರ 4-5 ದಿನಗಳಿಂದ ಅದೇ ನೀರು ಕುಡಿದಿರಯವುದು ತಿಳಿದಾಗ ಬೆಚ್ಚಿಬಿದ್ದಿದ್ದಾರೆ. ಪತ್ನಿಯ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ರಾಜಕುಮಾರ ಸಾದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಕುಡಿಯುವ ನೀರು ವಿಪರೀತವಾಗಿ ವಾಸನೆ ಬರುತ್ತಿದೆ. ಅದರಲ್ಲಿ ಕೂದಲುಗಳು ಬರ್ತಾ ಇದ್ದಾವೆ ಎಂಬುದಾಗಿ ಗ್ರಾಮಸ್ಥರು ಪಿಡಿಓ, ಅಧಿಕಾರಿಗಳಿಗೆ ದೂರು ನೀಡಿದ್ದರು. ಗ್ರಾಮಸ್ಥರ ದೂರಿನಿಂದ ಗ್ರಾಮದಲ್ಲಿ ಎಲ್ಲೋ ಕುಡಿಯೋ ನೀರಿನ ಪೈಪಿಗೆ ಚರಂಡಿ ನೀರು ಸೇರುತ್ತಿರಬೇಕು ಎಂದು ಹುಡುಕಾಡಿದ್ದಾರೆ. ಕೊನೆಗೆ ಸಿಗದ ಕಾರಣ ಅಂತಿಮವಾಗಿ ನೀರಿನ ಓವರ್ ಟ್ಯಾಂಕ್ ಮೇಲೆ ಹತ್ತಿ ನೋಡಿದಾಗ ವಿಷಯ ತಿಳಿದುಬಂದಿದೆ.
ನಾಪತ್ತೆಯಾಗಿದ್ದ ರಾಜಕುಮಾರ ದಾಸ ಶವ ಕೊಳೆತ ಸ್ಥಿತಿಯಲ್ಲಿ ಟ್ಯಾಂಕ್‌ನೊಳಗಡೆ ಪತ್ತೆಯಾಗಿದೆ. 1.5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಇದಾಗಿದ್ದು, 250 ರಿಂದ 300 ಜನರು ಇದರ ನೀರು ಸೇವಿಸುತ್ತಾರೆ. ವಿಷಯದ ಗಂಭೀರತೆಯನ್ನು ಅರಿತ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಅಣದೂರು ಗ್ರಾಮದಲ್ಲೇ ಠಿಕಾಣಿ ಹೂಡಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.