Home ಟಾಪ್ ಸುದ್ದಿಗಳು ವಿವಾದಿತ ಕೃಷಿ ಕಾಯ್ದೆ ವಾಪಸ್| ಅಧಿಕಾರದ ದುರಹಂಕಾರದ ಸೋಲು: ಶಿವಸೇನಾ

ವಿವಾದಿತ ಕೃಷಿ ಕಾಯ್ದೆ ವಾಪಸ್| ಅಧಿಕಾರದ ದುರಹಂಕಾರದ ಸೋಲು: ಶಿವಸೇನಾ

ಮುಂಬೈ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವ ಕೇಂದ್ರ ಸರ್ಕಾರದ ನಿರ್ಧಾರ ‘ಅಧಿಕಾರದ ದುರಹಂಕಾರದ ಸೋಲು’ ಹಾಗೂ ರೈತರ ಒಗ್ಗಟ್ಟಿಗೆ ಸಂದ ಜಯ ಎಂದು ಶಿವಸೇನಾ ವ್ಯಾಖ್ಯಾನಿಸಿದೆ.

ಉತ್ತರ ಪ್ರದೇಶ ಮತ್ತು ಪಂಜಾಬ್ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಆತಂಕದಿಂದ ಈ ಕ್ರಮಕ್ಕೆ ಅದು ಮುಂದಾಗಿದೆ ಎಂದು ಶಿವಸೇನಾದ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬರೆಯಲಾಗಿದೆ.

“ಇತ್ತೀಚೆಗೆ ನಡೆದ 13 ರಾಜ್ಯಗಳ ಉಪಚುನಾವಣೆಗಳಲ್ಲಿ ಬಿಜೆಪಿಗೆ ಎದುರಾದ ಹಿನ್ನಡೆಯಿಂದಾಗಿ ಪ್ರಧಾನಿ ಈ ನಿರ್ಧಾಕ್ಕೆ ಬಂದಿದೆ. ಕೇಂದ್ರವು ರೈತರ ಪ್ರತಿಭಟನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಪ್ರತಿಭಟನಾ ಸ್ಥಳದಲ್ಲಿ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿತ್ತು. ಪ್ರತಿಭಟನಾ ನಿರತ ರೈತರಿಗೆ ಖಲಿಸ್ತಾನಿಗಳು, ಪಾಕಿಸ್ತಾನಿಗಳು ಮತ್ತು ಭಯೋತ್ಪಾದಕರು ಎಂದೆಲ್ಲ ಹಣೆಪಟ್ಟಿ ಕಟ್ಟಿತ್ತು” ಎಂದು ಅದು ದೂರಿದೆ.

ಇಷ್ಟೆಲ್ಲ ಆದರೂ ರೈತರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ. ಪ್ರತಿಭಟನೆಯಲ್ಲಿ ಸುಮಾರು 550 ರೈತರು ಮೃತಪಟ್ಟಿದ್ದಾರೆ. ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವರೊಬ್ಬರ ಪುತ್ರ ರೈತರನ್ನು ವಾಹನದಡಿ ಸಿಲುಕಿಸಿದ್ದರು. ಆದರೂ ಪ್ರಧಾನಿ ಮೋದಿ ಅವರು ರೈತರ ಸಾವಿಗೆ ಕಂಬನಿಯನ್ನೂ ಮಿಡಿಯಲಿಲ್ಲ. ನಕಲಿ ಹಿಂದುತ್ವವಾದಿಗಳು ರಾವಣನಂತೆ ಸತ್ಯ ಮತ್ತು ನ್ಯಾಯದ ಮೇಲೆ ದಾಳಿ ನಡೆಸಿದ್ದಾರೆ ಎಂದು ಶಿವಸೇನೆ ಹೇಳಿದೆ.

Join Whatsapp
Exit mobile version