ನವದೆಹಲಿ: ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ 2018ರಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಇದೇ ವೇಳೆ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ ಮನವಿ ಸಂಬಂಧ ಜಾರ್ಖಂಡ್ ಸರ್ಕಾರ ಮತ್ತು ದೂರುದಾರ ಬಿಜೆಪಿ ಕಾರ್ಯಕರ್ತ ನವೀನ್ ಝಾ ಪ್ರತಿಕ್ರಿಯೆಯನ್ನು ಕೇಳಿದೆ. ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿಗೊಳಿಸಿದೆ.
ಇಂದಿನ ವಿಚಾರಣೆ ವೇಳೆ ರಾಹುಲ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಪ್ರಕರಣದಲ್ಲಿ 3ನೇ ವ್ಯಕ್ತಿಯಿಂದ ದೂರು ದಾಖಲಿಸಲಾಗಿದೆ. ಮಾನನಷ್ಟ ಅಪರಾಧದ (ಕ್ರಿಮಿನಲ್ ಮಾನನಷ್ಟ ಮೊಕದ್ದಮೆ) ವಿಷಯದಲ್ಲಿ ಈ ರೀತಿ ಮೂರನೇ ವ್ಯಕ್ತಿ ದೂರು ದಾಖಲಿಸುವುದನ್ನು ಅನುಮತಿಸಲಾಗದು ಎಂದು ಪ್ರಬಲ ವಾದ ಮಂಡಿಸಿದರು. ಅಲ್ಲದೇ ನೀವು ಬಾಧಿತ ವ್ಯಕ್ತಿಯಲ್ಲದಿದ್ದರೆ, ನೀವು ಹೇಗೆ ಪ್ರಾಕ್ಸಿ ದೂರು ಸಲ್ಲಿಸಬಹುದು? ಎಂದು ಅರ್ಜಿದಾರರ ಪರ ವಕೀಲರನ್ನು ಸಿಂಘ್ವಿ ಪ್ರಶ್ನಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಅಂತಿಮವಾಗಿ ಕೋರ್ಟ್, ಜಾರ್ಖಂಡ್ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ನೀಡಿದೆ. ಮುಂದಿನ ಆದೇಶದವರೆಗೆ ವಿಚಾರಣೆಯಲ್ಲಿನ ಎಲ್ಲಾ ಪ್ರಕ್ರಿಯೆಗಳು ತಡೆಹಿಡಿಯಲ್ಪಡುತ್ತವೆ ಎಂದಿದೆ.