ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ದೆಹಲಿಯಲ್ಲಿ ಕೊರೆವ ಚಳಿಯಲ್ಲೂ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರ ಆಕ್ರೋಶ ರಿಲಯನ್ಸ್ ಸಮೂಹದ ಜಿಯೊ ಮೊಬೈಲ್ ಸಿಮ್ ವಿರುದ್ಧ ತಿರುಗಿದ್ದರ ಬಿಸಿ ತಟ್ಟಿದಂತಿದೆ. ಲಕ್ಷಾಂತರ ಜಿಯೊ ನಂಬರ್ ಗಳು ಬೇರೆ ಕಂಪೆನಿಗಳ ಸಿಮ್ ಗೆ ಪೋರ್ಟ್ ಆಗಿರುವ ನಡುವೆ, ಇದೀಗ ರಿಲಯನ್ಸ್ ಜಿಯೊ ಹೊಸ ವರ್ಷದ ಕೊಡುಗೆಯಾಗಿ, ಕರೆ ಶುಲ್ಕ ಉಚಿತವಾಗಿ ನೀಡಲು ಮುಂದಾಗಿದೆ.
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿರ್ದೇಶನಗಳ ಪ್ರಕಾರದಂತೆ 2021, ಜ.1ರಿಂದ ಹೊಸ ಕ್ರಮಗಳನ್ನು ಜಿಯೊ ಅನುಷ್ಠಾನಗೊಳಿಸಲಾಗುತ್ತಿದ್ದು, ಎಲ್ಲಾ ದೇಶೀಯ ಧ್ವನಿ ಕರೆಗಳ ಮೇಲಿನ ಮೊಬೈಲ್ ನೆಟ್ ವರ್ಕ್ ಅಂತರ್ ಸಂಪರ್ಕ ಬಳಕೆ ಶುಲ್ಕ (ಯುಸಿ)ಯನ್ನು ಕೊನೆಗೊಳಿಸಲಾಗುತ್ತಿದೆ ಎನ್ನಲಾಗಿದೆ.
ಐಯುಸಿ ಕ್ರಮಗಳ ಅನುಸಾರ ಜ.1ರಿಂದ ಜಿಯೊ ನೆಟ್ ವರ್ಕ್ ನಿಂದ ದೇಶದಲ್ಲಿ ಯಾವುದೇ ನೆಟ್ ವರ್ಕ್ ಗಳಿಗೆ ಮಾಡುವ ವಾಯ್ಸ್ ಕಾಲ್ ಗಳಿಗೆ ಶುಲ್ಕ ಇರುವುದಿಲ್ಲ. ಕಳೆದ ಒಂದು ವರ್ಷದಿಂದ ಇತರ ನೆಟ್ ವರ್ಕ್ ಗಳಿಗೆ ಜಿಯೊದಿಂದ ಕರೆ ಮಾಡಿದರೆ, ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸಲಾಗುತಿತ್ತು.
ಪ್ರಧಾನಿ ಮೋದಿ ಸರಕಾರದ ನೂತನ ಕೃಷಿ ಕಾನೂನುಗಳು ರಿಲಯನ್ಸ್ ನಂತಹ ಕಾರ್ಪೊರೇಟ್ ಕಂಪೆನಿಗಳಿಗೆ ನೆರವುಂಟು ಮಾಡಲಿದೆ ಎಂಬ ಸಂದೇಶಗಳು ಹರಡಲ್ಪಟ್ಟಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ರೈತರು ಜಿಯೊ ಸಿಮ್ ನಿಂದ ಬೇರೆ ಕಂಪೆನಿಗಳಿಗೆ ಪೋರ್ಟ್ ಆಗಿದ್ದಾರೆ. ಅಲ್ಲದೆ, ಉತ್ತರ ಭಾರತದಲ್ಲಿ ಸಾವಿರಾರು ಜಿಯೊ ಮೊಬೈಲ್ ಟವರ್ ಗಳಿಗೆ ಹಾನಿ ಮಾಡಲಾಗಿದೆ. ರಿಲಯನ್ಸ್ ಸಮೂಹದ ಉತ್ಪನ್ನಗಳಿಗೂ ರೈತರು ಬಹಿಷ್ಕಾರ ಹಾಕಿದ್ದಾರೆ.