ಬೆಂಗಳೂರು: ಮದರಸಾಗಳಿಗೆ ರಾಜ್ಯ ಧನಸಹಾಯವನ್ನು ನಿಲ್ಲಿಸಲು ಶಿಫಾರಸು ಮಾಡುವುದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಎಸ್ ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.
ಮದ್ರಸಾಗಳು ಹಾಗೂ ಮದ್ರಸಾ ಮಂಡಳಿಗಳಿಗೆ ಹಣಕಾಸು ನೆರವನ್ನು ನಿಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಡಳಿತಾಧಿಕಾರಿಗಳಿಗೆ ಪತ್ರ ಬರೆದಿದೆ.
ಮುಸ್ಲಿಮರು ಅಥವಾ ಇನ್ನ್ಯಾರೇ ಆದರೂ, ಅವರೆಲ್ಲರೂ 2009ರ ಶಿಕ್ಷಣದ ಹಕ್ಕು ಕಾಯ್ದೆಯಡಿ ಮಾನ್ಯತೆ ಪಡೆದ ಶಾಲೆಗಳಲ್ಲಿ ಮಾತ್ರವೇ ದಾಖಲಾಗಿರಬೇಕೆಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನುನಗೊ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಆರ್ ಟಿಇ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಮದರಸಾಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಅನುದಾನವನ್ನು ನಿಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ ಸಿಪಿಸಿಆರ್) ಮಾಡಿರುವ ಶಿಫಾರಸ್ಸು ಆಕ್ಷೇಪಾರ್ಹ ಮಾತ್ರವಲ್ಲ, ಭಾರತೀಯ ಸಂವಿಧಾನದ ಅನುಚ್ಛೇದ 29 ಮತ್ತು 30 ರಲ್ಲಿ ಖಾತ್ರಿ ಪಡಿಸಿರುವ ಅಲ್ಪಸಂಖ್ಯಾತರು ತಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಹೇಳಿದ್ದಾರೆ.