ಉತ್ತರ ಪ್ರದೇಶ: 55 ವರ್ಷದ ದಲಿತ ಮಹಿಳೆಗೆ ಬಂದೂಕು ತೋರಿಸಿ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಗೌತಮಬುದ್ದ ನಗರ ಜಿಲ್ಲೆಯ ಜೆವಾರ್‌ನಲ್ಲಿ ನಡೆದಿದೆ. ಮಹಿಳೆಯನ್ನು ಬಯಲೊಂದಕ್ಕೆ ಕರೆದೊಯ್ದ ದುಷ್ಕರ್ಮಿಗಳು ಬಂದೂಕು ತೋರಿಸಿ ಬೆದರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಬುಧವಾರ ಆರೋಪಿ ಮಹೇಂದ್ರನನ್ನು ಜೇವರ್‌ನಲ್ಲಿರುವ ಆತನ ಹಳ್ಳಿಯ ಸಮೀಪದಿಂದ ಬಂಧಿಸಲಾಗಿದೆ. ಜೇವರ್ ಪೋಲಿಸ್, ವಿಶೇಷ ಕಾರ್ಯಾಚರಣೆ ಗುಂಪು ಮತ್ತು SWAT ನ ಜಂಟಿ ತಂಡವು ಆತನನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ಡಿ (ಗ್ಯಾಂಗ್‌ರೇಪ್), 352 (ಹಲ್ಲೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಲ್ಲದೇ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ – 1989ರ ಅಡಿಯಲ್ಲಿರುವ ಸೆಕ್ಷನ್ ಗಳನ್ನು ಪ್ರಕರಣದಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.