Home ರಾಷ್ಟ್ರೀಯ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್ ಸಿಬಿ

ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್ ಸಿಬಿ

ಮುಂಬೈ: ಐಪಿಎಲ್ 15ನೇ ಆವೃತ್ತಿಯ 54ನೇ ಪಂದ್ಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಪ್ಲೇಆಫ್ ಹಂತಕ್ಕೇರಲು ಗೆಲುವು ಅನಿವಾರ್ಯವಾಗಿರುವ ಭಾನುವಾರದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಬಳಗ  ಸನ್ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದೆ.

2011ರಿಂದ ಐಪಿಎಲ್ ನ ಎಲ್ಲಾ ಆವೃತ್ತಿಗಳಲ್ಲೂ ಆರ್ ಸಿಬಿ ತಂಡ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಪರಿಸರದ ಮಹತ್ವ ಸಾರುವ ಮಹತ್ವದ ಪ್ರಯತ್ನ ಮಾಡುತ್ತಲೇ ಬಂದಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಸ್ವಚ್ಛ ಮತ್ತು ಹಸಿರಿನಿಂದ ಕೂಡಿದ ಪರಿಸರವನ್ನು ಉಳಿಸಲು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ  ‘Go Green’ ಅಭಿಯಾನದಡಿ ಮೈದಾನಕ್ಕಿಳಿಯಲಿದೆ.

ಗ್ರೀನ್ ಜೆರ್ಸಿ ಧರಿಸಿದರೆ ಸೋಲುವ ಭೀತಿ !?

2011ರಿಂದ ಇದುವರೆಗೂ ಆರ್ ಸಿಬಿ 9 ಬಾರಿ ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದು, ಈ ಪೈಕಿ ಕೇವಲ 2 ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ. 2011ರಲ್ಲಿ ಮೊದಲ ಬಾರಿಗೆ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ದ ನಡೆದ ಪಂದ್ಯದಲ್ಲಿ ಆರ್ ಸಿಬಿ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು. ಆ ಬಳಿಕ 2016ರಲ್ಲಿ ಗುಜರಾತ್ ಲಯನ್ಸ್ ಎದುರು 144 ರನ್ ಗಳ ಅಂತರದ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ದಾಖಲೆಯ 229 ರನ್ ಗಳ ಜತೆಯಾಟವಾಡಿದ್ದರು. ವಿರಾಟ್ ಕೊಹ್ಲಿ 109 ರನ್ ಸಿಡಿಸಿದರೆ, ಎಬಿ ಡಿವಿಲಿಯರ್ಸ್ 129 ರನ್ ಚಚ್ಚಿದ್ದರು.

2020ರಲ್ಲಿ ಕೊನೆಯದಾಗಿ  ಗ್ರೀನ್ ಜೆರ್ಸಿ ತೊಟ್ಟಿದ್ದ ಆರ್ ಸಿಬಿ, ಆ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 8 ವಿಕೆಟ್ ಗಳ ಅಂತರದ ಸೋಲು ಕಂಡಿತ್ತು. ಕಳೆದ ಆವೃತ್ತಿಯ ಐಪಿಎಲ್ ನಲ್ಲಿ ಕೋವಿಡ್ ವಾರಿಯರ್ಸ್ ಗೆ ಗೌರವ ಸೂಚಿಸುವ ಸಲುವಾಗಿ ಆರ್ ಸಿಬಿ ಬೂದು ಬಣ್ಣದ ಜೆರ್ಸಿ ಧರಿಸಿ ಕಣಕ್ಕಿಳಿದಿತ್ತು.

ಪ್ರಸಕ್ತ ಆವೃತ್ತಿಯಲ್ಲಿ ಫಾಫ್ ಡು ಪ್ಲೆಸಿಸ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ 11 ಪಂದ್ಯಗಳನ್ನಾಡಿದೆ. ಇದರಲ್ಲಿ 6 ಗೆಲುವು ಮತ್ತು 5 ಪಂದ್ಯಗಳಲ್ಲಿ ಸೋಲನುಭವಿಸಿದೆ. ಒಟ್ಟು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮತ್ತೊಂದೆಡೆ  ಕೇನ್ ವಿಲಿಯಮ್ಸನ್ ನೇತೃತ್ವದ ಸನ್ರೈ ಸರ್ಸ್ ಹೈದರಾಬಾದ್ ತಂಡವು 10 ಪಂದ್ಯಗಳನ್ನಾಡಿದ್ದು, ತಲಾ 5 ಗೆಲುವು ಮತ್ತು ಸೋಲು ಕಾಣುವುದರೊಂದಿಗೆ  ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

Join Whatsapp
Exit mobile version