ಮಂಗಳೂರು: ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ಪೇರಡ್ಕದಲ್ಲಿ ಇಮ್ಯಾನ್ಯುಯೆಲ್ ಚರ್ಚಿನ ಮೇಲೆ ದಾಳಿ ನಡೆಸಿ ಕೇಸರಿ ಧ್ವಜ ಕಟ್ಟಿದ ಪ್ರಕರಣದ ಸಂತ್ರಸ್ತರು ಮತ್ತು ಈ ಬಗ್ಗೆ ಧ್ವನಿ ಎತ್ತಿದ ಹೋರಾಟಗಾರರ ವಿರುದ್ಧ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸಿರುವುದನ್ನು SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪೇರಡ್ಕದ ಇಮ್ಯಾನ್ಯುಯೆಲ್ ಚರ್ಚ್ ಗೆ ಯಾರೂ ಇಲ್ಲದ ಸಮಯದಲ್ಲಿ ಬಜರಂಗ ದಳದ ಕಿಡಿಗೇಡಿಗಳು ದಾಳಿ ನಡೆಸಿ ಅಲ್ಲಿನ ಹೋಲಿ ಕ್ರಾಸನ್ನು ಧ್ವಂಸ ಮಾಡಿ ಅಲ್ಲಿ ಕೇಸರಿ ದ್ವಜ ಕಟ್ಟಿದ್ದು, ಇದಕ್ಕೆ ಜಿಲ್ಲಾದ್ಯಂತ ತೀವ್ರ ಅಕ್ರೋಶ ವ್ಯಕ್ತವಾಗಿತ್ತು. ಘಟನೆಯ ಬಗ್ಗೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕಿತ್ತು. ಆದರೂ ಪೊಲೀಸರು ದೂರು ದಾಖಲಿಸಿರಲಿಲ್ಲ. ದಾಳಿಯಿಂದ ಭಯ ಹಾಗೂ ಆತಂಕಕ್ಕೊಳಗಾಗಿದ್ದ ಚರ್ಚಿನ ಧರ್ಮ ಗುರುಗಳು ಮತ್ತು ಚರ್ಚಿನ ಅನುಯಾಯಿಗಳು ದೂರು ನೀಡಿರಲಿಲ್ಲ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ SDPI ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ವಿಕ್ಟರ್ ಮಾರ್ಟೀಸ್ ಅವರ ನೇತೃತ್ವದ ನಿಯೋಗವು ಚರ್ಚ್ನ ಧರ್ಮ ಗುರುಗಳು ಹಾಗೂ ಅಲ್ಲಿನ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಅವರಿಗೆ ಧೈರ್ಯತುಂಬಿ ಕಡಬ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದರು. ಆದರೆ ಮೊದಲು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದ ಪೊಲೀಸರು ಕೊನೆಗೆ ದೂರು ಸ್ವೀಕರಿಸಿದ್ದರು.
ದೂರು ಕೊಟ್ಟು ಎರಡು ದಿನಗಳಾದರೂ ತನಿಖೆ ನಡೆಸಿ ಅರೋಪಿಗಳನ್ನು ಪತ್ತೆ ಹಚ್ಚಬೇಕಾದ ಪೊಲೀಸರು, ಬಳಿಕ ಸಂಘ ಪರಿವಾರದ ಕಾರ್ಯಕರ್ತನೋರ್ವ ಚರ್ಚ್ ನ ಧರ್ಮ ಗುರುಗಳು ಮತ್ತು SDPI ಮುಖಂಡರ ವಿರುದ್ಧ ಕೊಟ್ಟ ಸುಳ್ಳು ದೂರನ್ನು ಸ್ವೀಕರಿಸಿ FIR ದಾಖಲಿಸುವ ಮೂಲಕ ಸಂತ್ರಸ್ತರು ಮತ್ತು ಹೋರಾಟಗಾರರಿಗೆ ಅನ್ಯಾಯ ಎಸಗಿದ್ದಾರೆ. ಪೊಲೀಸರಿಗೆ ನೈಜ ಘಟನೆ ಗೊತ್ತಿದ್ದರೂ ಪೊಲೀಸರು ಯಾರ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಂಡಿದ್ದಾರೆ ಎಂದು ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.
ಕಿಡಿಗೇಡಿಗಳಿಂದ ಸಮಾಜ ವಿರೋಧಿ ಕೃತ್ಯಗಳು ನಡೆದಾಗ ಅದರ ವಿರುದ್ಧ ಪೊಲೀಸರು ದೂರು ದಾಖಲಿಸದಿದ್ದಾಗ ಸಂತ್ರಸ್ತರು ದೂರು ನೀಡುವುದು ಅಪರಾಧವೇ ?. ಇದೇ ರೀತಿ ಮುಂದುವರೆದರೆ ನಾಡಿನ ಕಾನೂನು ಸುವ್ಯವಸ್ಥೆ ಏನಾಗಬಹುದು? ಉತ್ತರ ಪ್ರದೇಶ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ಗೂಂಡಾಗಳು ಅಲ್ಪಸಂಖ್ಯಾತ ಸಮುದಾಯದವರ ಮೇಲೆ, ಅವರ ಆರಾಧನಾಲಯಗಳ ಮೇಲೆ ಅವ್ಯಾಹತವಾಗಿ ದಾಳಿ ನಡೆಸುತ್ತಿದ್ದಾರೆ. ಇವರ ವಿರುದ್ಧ ಯಾಕೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ದಲಿತ ಸಮುದಾಯದಿಂದ ಆಯ್ಕೆಯಾದ ಜಿಲ್ಲೆಯ ಏಕೈಕ ಸಚಿವ ಅಂಗಾರ ಅವರ ಸ್ವ ಕ್ಷೇತ್ರದಲ್ಲಿ ಇತ್ತೀಚೆಗೆ ಬಜರಂಗ ದಳದ ಗೂಂಡಾಗಳು ಕ್ರೈಸ್ತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬೆನ್ನಿಗೇ ಕಡಬದಲ್ಲಿ ಕ್ರೈಸ್ತರ ಚರ್ಚ್ ಗೆ ದಾಳಿ ಮಾಡಲಾಗಿದೆ. ಎರಡೂ ಕಡೆಗಳಲ್ಲಿ ಅರೋಪಿಗಳ ಬಂಧನ ಇನ್ನೂ ಆಗಿಲ್ಲ. ನಾಡಿನ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಇರುವ ಉನ್ನತ ಪೊಲೀಸ್ ಅಧಿಕಾರಿಗಳು ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಸಂತ್ರಸ್ತರು ಮತ್ತು ಹೋರಾಟಗಾರರ ಮೇಲೆ ಹೂಡಿದ ಸುಳ್ಳು ಮೊಕದ್ದಮೆಗಳನ್ನು ಪೊಲೀಸ್ ಇಲಾಖೆ ಕೂಡಲೇ ಹಿಂಪಡೆಯಬೇಕು. ಚರ್ಚ್ ದಾಳಿಯ ಆರೋಪಿಗಳನ್ನು ಕೂಡಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಇದರ ವಿರುದ್ಧ ಜನಾಂದೋಲನದ ಜತೆಗೆ ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಅನ್ವರ್ ಸಾದತ್ ಬಜತ್ತೂರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.