ಬೆಂಗಳೂರು: ಸಬ್ ಅರ್ಬನ್ ರೈಲು ವಿಚಾರದಲ್ಲಿ ರಾಜ್ಯ ಹಿತಾಸಕ್ತಿ ಬಲಿಕೊಟ್ಟಿದ್ದು ಯಡಿಯೂರಪ್ಪ. ಈಗ ನಮ್ಮ ಮೇಲೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಯಡಿಯೂರಪ್ಪ ಅವರು ಬೆಂಗಳೂರು ನಗರದ ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾರವು ರೂ. 450 ಕೋಟಿ ಬಿಡುಗಡೆ ಮಾಡಿದೆ ಎಂದಿದ್ದಾರೆ. ಇದು ಅರ್ಧ ಸತ್ಯ ಮಾತ್ರ ಎಂದಿರುವ ಸಿಎಂ ಸಿದ್ದರಾಮಯ್ಯ, ವಾಸ್ತವ ಬೇರೆನೇ ಇದೆ. ನಾಡಿಗೆ ಆಗುತ್ತಿರುವ ಅನ್ಯಾಯ ಮುಚ್ಚಿಟ್ಟಿರುವುದು ಯಡಿಯೂರಪ್ಪ ಅವರೇ ಹೊರತು ನಾನಲ್ಲ. 2018-19ರ ಕೇಂದ್ರ ಬಜೆಟ್ ಭಾಷಣದಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ, ರೂ.17,000 ಕೋಟಿ ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕೇಂದ್ರ ಸರ್ಕಾರವು ಯೋಜನೆ ರೂಪಿಸಲಿದೆ ಎಂದು ಹೇಳಿದ್ದರು. ಈ ಘೋಷಣೆಯನ್ನು 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಬಳಸಿಕೊಂಡ ಬಿಜೆಪಿ , ಕೇಂದ್ರ ಸರ್ಕಾರ ಘೋಷಿಸಿದ ರೂ.17,000 ಕೋಟಿ ಅನುದಾನ ಬಳಸಿಕೊಂಡು ಬೆಂಗಳೂರಿನ ಉಪನಗರ ರೈಲು ಜಾಲವನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿತ್ತು ಎಂದು ಸಿದ್ದರಾಮಯ್ಯ ನೆನಪಿಸಿದ್ದಾರೆ.
ಆದರೆ ಆ ಆರ್ಥಿಕ ವರ್ಷ ಬಿಡಿಗಾಸು ಹಣವನ್ನು ಕೂಡ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರಲಿಲ್ಲ. 2019ರ ಜುಲೈನಲ್ಲಿ ಆಪರೇಷನ್ ಕಮಲದ ಮೂಲಕ ರಾಜ್ಯದ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಕರ್ನಾಟಕ ಬಿಜೆಪಿ, ಫೆಬ್ರವರಿ 2020ರಲ್ಲಿ ಮಂಡಿಸಿದ 2020-21ರ ಕೇಂದ್ರ ಬಜೆಟ್ ನಲ್ಲಿ ಸಬ್ ಅರ್ಬನ್ ರೈಲು ಯೋಜನೆಗೆ ತಾನು ಕೇವಲ 20% ಅನುದಾನ ನೀಡುವುದಾಗಿ, ಮತ್ತೆ 20% ರಾಜ್ಯ ಸರ್ಕಾರ ಹಾಗೂ ಉಳಿದ 60% ಹಣವನ್ನು ರಾಜ್ಯಕ್ಕೆ ಸಾಲ ಕೊಡಿಸುವುದಾಗಿ ಘೋಷಿಸಿತು. ಅಂದಿನ ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ ಚಕಾರವೆತ್ತದೆ ಸಮ್ಮತಿಸಿತು. ಈ ಹೊಸ ಬದಲಾವಣೆಯ ನಂತರ 2022-23ರಲ್ಲಿ ಕೇಂದ್ರ ಸರ್ಕಾರ ರೂ.450 ಕೋಟಿ ಅನುದಾನವನ್ನು ನಿಗದಿ ಮಾಡಿತ್ತು, ಆದರೆ ಕೊಟ್ಟಿದ್ದು ರೂ.50 ಕೋಟಿ ಮಾತ್ರ. ನಂತರ ಪ್ರಸಕ್ತ ಸಾಲಿನಲ್ಲಿ ರೂ.1350 ಕೋಟಿ ನಿಗದಿ ಮಾಡಿ, ಈ ವರೆಗೆ ಕೇವಲ ರೂ.450 ಕೋಟಿ ಬಿಡುಗಡೆ ಮಾಡಿದೆ. ಅಂದು ಮೋದಿ ಸರ್ಕಾರದ ಜೊತೆ ಸೇರಿ ನಾಡಿಗೆ ಅನ್ಯಾಯ ಮಾಡಿದ್ದ ಯಡಿಯೂರಪ್ಪ ಅವರೇ ಇಂದು ಸಬ್ ಅರ್ಬನ್ ರೈಲು ಯೋಜನೆಗೆ ಕಾಂಗ್ರೆಸ್ ನಿರಾಸಕ್ತಿ ತೋರುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಂಕಿಅಂಶ ಸಹಿತ ವಿವರಿಸಿದ್ದಾರೆ.