ಮುಂಬೈ: ಭಾರತದ ಪ್ರಮುಖ ಕೈಗಾರಿಕೋದ್ಯಮಿಯಾಗಿರುವ ರತನ್ ಟಾಟಾ ಯಾವುದೇ ಬಾಡಿಗಾರ್ಡ್ ಇಲ್ಲದೆ ತಮ್ಮದೇ ಒಡೆತನದ ಮುಂಬೈನ ತಾಜ್ ಹೋಟೆಲ್ ಗೆ ಟಾಟಾ ನ್ಯಾನೋ ಕಾರಿನಲ್ಲಿ ಬಂದಿಳಿದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾವೇ ಬಿಡುಗಡೆ ಮಾಡಿದ್ದ ಟಾಟಾ ನ್ಯಾನೋದಲ್ಲಿ ತಾಜ್ ಹೋಟೆಲ್ ಗೆ ಆಗಮಿಸಿದ ರತನ್ ಟಾಟಾ ಮತ್ತೊಮ್ಮೆ ಜನರ ಹೃದಯವನ್ನು ಗೆದ್ದಿದ್ದಾರೆ. ಈ ಬಜೆಟ್ ಸ್ನೇಹಿ ಕಾರನ್ನು 2008ರಲ್ಲಿ ಬಿಡುಗಡೆ ಮಾಡಲಾಗಿತ್ತು.
ಮುಂಬೈ ಮೂಲದ ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ರತನ್ ಟಾಟಾ, ಯಾವುದೇ ಬಾಡಿಗಾರ್ಡ್ ಇಲ್ಲದೆ ಬಿಳಿ ನ್ಯಾನೋದಲ್ಲಿ ತಾಜ್ ಹೋಟೆಲ್ ಗೆ ಆಗಮಿಸುತ್ತಿರುವುದನ್ನು ಕಾಣಬಹುದು. ನಂತರ ಅವರನ್ನು ಹೊಟೇಲ್ ಸಿಬ್ಬಂದಿ ಒಳಗೆ ಕರೆದೊಯ್ದರು.