Home ಟಾಪ್ ಸುದ್ದಿಗಳು ನಾಳೆ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌

ನಾಳೆ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌

2.60 ಲಕ್ಷ ಪ್ರಕರಣಗಳು ಒಂದೇ ದಿನ ಇತ್ಯರ್ಥ

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಡಿ.9ರಂದು ರಾಜ್ಯ ವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್‌ (ಜನತಾ ನ್ಯಾಯಾಲಯ) ಆಯೋಜನೆ ಮಾಡಿದೆ. ಇದು ಈ ವರ್ಷದ ನಾಲ್ಕನೇ ಲೋಕ ಅದಾಲತ್‌ ಆಗಿದೆ. ವ್ಯಾಜ್ಯ ಮುಕ್ತ, ಸೌಹಾರ್ದಯುತ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಅದಾಲತ್ ಮಾಡಲಾಗುತ್ತಿದೆ.

ಡಿ.9ರಂದು ಹೈಕೋರ್ಟ್‌ನ ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳು ಸಹಿತ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಸಾವಿರಕ್ಕೂ ಅಧಿಕ ವಿಚಾರಣ ಪೀಠಗಳಲ್ಲಿ ಲೋಕ್‌ ಅದಾಲತ್‌ ಕಲಾಪಗಳು ನಡೆಯಲಿವೆ.

ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 19.93 ಲಕ್ಷ ಪ್ರಕರಣಗಳ ಪೈಕಿ 2.60 ಲಕ್ಷ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ. ಪ್ರಕರಣಗಳನ್ನು ಗುರುತಿಸುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದ್ದು, ಈ ಸಂಖ್ಯೆ ಏರಿಕೆಯಾಗಬಹುದು.

ಕರ್ನಾಟಕ ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ಸಭಾ ಭವನದಲ್ಲಿ ಗ ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ನೂತನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್‌, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌ ಜೊತೆಗೆ ಇದ್ದರು.

Join Whatsapp
Exit mobile version