◾ತಾನೂ ಜಾತಿ ತಾರತಮ್ಯಕ್ಕೆ ಒಳಗಾಗಿದ್ದೇನೆಂದು ಹೇಳಿದ ಹಿರಿಯ ಕಲಾವಿದ!
ಹುಬ್ಬಳ್ಳಿ: ವೈಜ್ಞಾನಿಕವಾಗಿ ಮತ್ತು ಅರ್ಹರಿಗೆ ಮೀಸಲಾತಿ ಸೌಲಭ್ಯ ದೊರೆಯಲು ದೇಶಾದ್ಯಂತ ಜಾತಿಗಣತಿ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ‘ಮುಖ್ಯಮಂತ್ರಿ’ ಚಂದ್ರು, ಸರ್ವರಿಗೂ ಸೌಲಭ್ಯ ಸಿಗುವ ವಾತಾವರಣ ಸೃಷ್ಟಿಯಾಗಬೇಕಾದರೆ ಜಾತಿಗಣತಿ ಅವಶ್ಯವಾಗಿದೆ. ರಾಜ್ಯದಲ್ಲಿ ಕಾಂತರಾಜ ಅವರ ನೇತೃತ್ವದಲ್ಲಿ ನಡೆದ ಜಾತಿಗಣತಿಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಬೇಕು. ಸದನದ ಮುಂದಿಟ್ಟು ಅದು ವೈಜ್ಞಾನಿಕವೇ ಅಥವಾ ಅಲ್ಲವೇ ಎಂಬುದನ್ನು ಚರ್ಚೆ ನಡೆಸಬೇಕು. ವೈಜ್ಞಾನಿಕವಾಗಿದ್ದರೆ ಅದರ ಅನುಸಾರ ಮೀಸಲಾತಿ, ಒಳ ಮೀಸಲಾತಿಯನ್ನೂ ಕಲ್ಪಿಸಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರನ್ನು ನಾಗಪುರದ ಹೆಗಡೇವಾರ್ ಸ್ಮಾರಕದೊಳಗೆ ಬಿಡದಿರುವ ಘಟನೆ ಜಾತಿ ಕಾರಣಕ್ಕೇ ನಡೆದಿದ್ದರೆ ಅದನ್ನು ಖಂಡಿಸುತ್ತೇನೆ. ಆರ್‌ಎಸ್‌ಎಸ್ ಇದಕ್ಕೆ ಉತ್ತರಿಸಬೇಕು. ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ಹಲವು ಸಭೆಗಳಿಗೆ ನನ್ನನ್ನು ಆಹ್ವಾನಿಸುತ್ತಿರಲಿಲ್ಲ. ನಿಖರ ಕಾರಣ ಹೇಳದೆ ದೂರವಿಡಲಾಗುತ್ತಿತ್ತು ಎಂದು ಪರೋಕ್ಷವಾಗಿ ತಾವೂ ಜಾತಿ ತಾರತಮ್ಯಕ್ಕೆ ಒಳಗಾಗಿದ್ದೇನೆಂದು ಹಿರಿಯ ಕಲಾವಿದರೂ ಆದ ಚಂದ್ರು ಹೇಳಿದರು.