ಬೆಂಗಳೂರು : ಮಲೇಷ್ಯಾದ ಪ್ರವಾಸಿ ರಾಯಭಾರಿಯೊಬ್ಬರ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದು, ಅತ್ಯಾಚಾರ ಎಸಗಿ ಮೂರು ಬಾರಿ ಗರ್ಭಪಾತ ಮಾಡಿಸಿದ್ದ ಆರೋಪದಲ್ಲಿ ತಮಿಳುನಾಡಿನ ಮಾಜಿ ಸಚಿವ ಎಂ. ಮಣಿಕಂಠನ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಮಣಿಕಂಠನ್ ಅವರನ್ನು ಬಂಧಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ತನ್ನ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದು, ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಎಸಗಿದ್ದಾರೆ. ಇದರಿಂದಾಗಿ ಮೂರು ಬಾರಿ ಗರ್ಭ ಧರಿಸಿದ್ದ ತನ್ನನ್ನು ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಮಲೇಷ್ಯಾ ಮೂಲದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ತನಿಖೆ ನಡೆಸುತ್ತಿದ್ದಂತೆ ತಮ್ಮನ್ನು ಪೊಲೀಸರು ಬಂಧಿಸದಂತೆ ಕೋರಿ ಮಣಿಕಂಠನ್ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ, ಮದ್ರಾಸ್ ಹೈಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನ್ನನ್ನು ಬಂಧಿಸಬಹುದು ಎಂದು ಮಣಿಕಂಠನ್ ತಮಿಳುನಾಡಿನಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ಕರ್ನಾಟಕದಲ್ಲಿ ಜೆಡಿಎಸ್ ನಾಯಕರೊಬ್ಬರಿಗೆ ಸೇರಿದ ಸ್ಥಳದಲ್ಲಿ ಮಣಿಕಂಠನ್ ಬಚ್ಚಿಟ್ಟುಕೊಂಡಿದ್ದರು. ಆದರೆ, ಮಾಹಿತಿ ತಿಳಿದ ಸಿಐಡಿ ಪೊಲೀಸರು ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎಐಎಡಿಎಂಕೆ ಸರಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ಮಣಿಕಂಠನ್, ಈಗಾಗಲೇ ವಿವಾಹವಾಗಿದ್ದರೂ, ದಕ್ಷಿಣ ಏಷ್ಯಾದ ಪ್ರವಾಸಿ ರಾಯಭಾರಿಯಾಗಿದ್ದ ಮಹಿಳೆಯ ಜೊತೆ ಸಂಬಂಧವಿರಿಸಿಕೊಂಡಿದ್ದರು ಎನ್ನಲಾಗಿದೆ. ಮದುವೆಯಾಗುವಂತೆ ಕೇಳಿದರೆ ಬೆದರಿಕೆ ಹಾಕುತ್ತಿದ್ದರು ಎಂದು ಮಹಿಳೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.