Home ಟಾಪ್ ಸುದ್ದಿಗಳು ಲಾಹೋರ್ ಕೋಟೆಯಲ್ಲಿ ರಣಜಿತ್ ಸಿಂಗ್ ಪ್ರತಿಮೆ ಭಗ್ನ

ಲಾಹೋರ್ ಕೋಟೆಯಲ್ಲಿ ರಣಜಿತ್ ಸಿಂಗ್ ಪ್ರತಿಮೆ ಭಗ್ನ

ಲಾಹೋರ್: ಲಾಹೋರ್ ಕೋಟೆ ಕಾಂಪ್ಲೆಕ್ಸ್ ನಲ್ಲಿ ನಿಲ್ಲಿಸಿದ್ದ ಮಹಾರಾಜ ರಣಜಿತ್ ಸಿಂಗ್ ರ ಪ್ರತಿಮೆಯನ್ನು ಮಂಗಳವಾರ ತೆಹ್ರಿಕ್ ಎ ಲಬ್ಬೈಕ್ ಗುಂಪಿನ ಯುವಕನೋರ್ವ ಭಗ್ನಗೊಳಿಸಿರುವ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ಭಾರೀ ಬಂದೋಬಸ್ತ್ ಇರುವ ಕೋಟೆಯಲ್ಲಿ ಹೀಗೆ ಭಗ್ನಗೊಳಿಸುತ್ತಿರುವುದು ಇದು ಮೂರನೆಯ ಬಾರಿಯಾಗಿದೆ.


ಮಹಾರಾಜರ 180ನೇ ಸಂಸ್ಮರಣಾ ದಿನದಂದು 2019ರಲ್ಲಿ 9 ಅಡಿ ಎತ್ತರದ ಕಂಚಿನ ಈಗಿನ ಪ್ರತಿಮೆಯನ್ನು ನಿಲ್ಲಿಸಲಾಗಿತ್ತು. ಸಿಖ್ ಸಾಮ್ರಾಜ್ಯದ ಮೊದಲ ಮಹಾರಾಜ ರಣಜಿತ್ ಸಿಂಗ್ ಅವರು 40 ವರ್ಷಗಳಷ್ಟು ಕಾಲ ಆಳಿ 1839ರಲ್ಲಿ ನಿಧನರಾಗಿದ್ದರು. ಪೂರ್ಣ ಸಿಖ್ ತೊಡುಗೆಯಲ್ಲಿ ಕೈಯಲ್ಲಿ ಕತ್ತಿ ಹಿಡಿದು, ಕುದುರೆ ಮೇಲೆ ಕುಳಿತ ರಣಜಿತ್ ಪ್ರತಿಮೆಯನ್ನು ಈ ಕೋಟೆಯಲ್ಲಿ ನಿರ್ಮಿಸಲಾಗಿತ್ತು.


ಮೂರ್ತಿ ಲೋಕಾರ್ಪಣೆಗೊಂಡ ಎರಡೇ ತಿಂಗಳಲ್ಲಿ ಮೂರ್ತಿಭಂಗ ಮಾಡಲಾಗಿದ್ದು, ಈ ಸಂಬಂಧ ತೆಹ್ರಿಕ್ ಎ ಲಬ್ಬೈಕ್ ನ ಇಬ್ಬರನ್ನು ಬಂಧಿಸಲಾಗಿದೆ. ಕಹರ್ ಬಹಾರ್ ಎಂಬ ಹೆಸರಿನ ಕಲಾವಿದ ಕುದುರೆಯ ಮೇಲೆ ಕುಳಿತ ಮಹಾರಾಜರ ಮೂರ್ತಿ ತಯಾರಿಸಲು ಎಂಟು ತಿಂಗಳು ತೆಗೆದುಕೊಂಡಿದ್ದರು. ಬರಾಜ್ಕಿ ರಾಜಸತ್ತೆಯ ಸ್ಥಾಪಕ ದೋಸ್ತ್ ಮುಹಮ್ಮದ್ ಖಾನ್ ಆ ಕುದುರೆಯನ್ನು ರಣಜಿತ್ ಸಿಂಗ್ ರಿಗೆ ಕೊಡುಗೆಯಾಗಿ ನೀಡಿದ್ದ. ಗೋಡೆಗಳೊಳಗಿನ ಲಾಹೋರ್ ನಗರ ಪ್ರಾಧಿಕಾರವು ಅಮೆರಿಕ ಸಂಯುಕ್ತ ಸಂಸ್ಥಾನದ ಸಿಖ್ ಹೆರಿಟೇಜ್ ಫೌಂಡೇಶನ್ ಜೊತೆ ಸೇರಿ ಈ ಪ್ರತಿಮೆ ಅನಾವರಣ ಮಾಡಿತ್ತು.

Join Whatsapp
Exit mobile version