Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಮಿತಿಮೀರಿದ ಭ್ರಷ್ಟಾಚಾರ, ಶಾಸಕರು, ಮಂತ್ರಿಗಳಿಗೆ ಸಿಂಹ ಪಾಲು : ಸಿಬಿಐ ತನಿಖೆಗೆ SDPI ಆಗ್ರಹ

ರಾಜ್ಯದಲ್ಲಿ ಮಿತಿಮೀರಿದ ಭ್ರಷ್ಟಾಚಾರ, ಶಾಸಕರು, ಮಂತ್ರಿಗಳಿಗೆ ಸಿಂಹ ಪಾಲು : ಸಿಬಿಐ ತನಿಖೆಗೆ SDPI ಆಗ್ರಹ

ಬೆಂಗಳೂರು: ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇಲ್ಲಿಯವರೆಗೆ 40 % ಕಮಿಷನ್ ಆರೋಪ ಕೇಳಿ ಬರುತ್ತಿತ್ತು. ಈಗ ಅದು “ಪ್ರಗತಿ” ಸಾಧಿಸಿದ್ದು 50% ಗೆ ತಲುಪಿರುವ ಬಗ್ಗೆ ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಇದು ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ. ಕರ್ನಾಟಕ ಸರ್ಕಾರದ ಮೇಲಿರುವ ಎಲ್ಲ ಭ್ರಷ್ಟಾಚಾರ ಆರೋಪಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್  ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಿನ್ನೆ ಸುದ್ದಿವಾಹಿನಿಯೊಂದರಲ್ಲಿ ಗುತ್ತಿಗೆದಾರರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದರು.  ಕಾಮಗಾರಿಯ ಪ್ರತಿ ಹಂತದಲ್ಲಿಯೂ ಹಣ ಕೊಡಬೇಕು, ಅದು ಕಾಮಗಾರಿ ಮೊತ್ತದ 40% ಗಿಂತಲೂ ಹೆಚ್ಚಾಗುತ್ತಿದೆ. ಅಲ್ಲದೆ ಕಾರವಾರದ ಶಾಸಕಿ  ರೂಪಾಲಿ ನಾಯ್ಕ ಮತ್ತು ಅವರ ಆಪ್ತ ಸಹಾಯಕರು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದರು. ಶಾಸಕಿಯ ವಿರುದ್ಧ ಎಸಿಬಿಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ. ಇದು ಈ ಸರ್ಕಾರದಲ್ಲಿನ ಭ್ರಷ್ಟಾಚಾರದ ಆಳ-ಅಗಲವನ್ನು ಬಿಂಬಿಸುತ್ತದೆ ಎಂದು ಹೇಳಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ನಿನ್ನೆ ಸುದ್ದಿಗೋಷ್ಠಿ ನಡೆಸಿ, ಈ ಸರ್ಕಾರದ ವಿರುದ್ಧ ಸಾಕಷ್ಟು ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ ಮತ್ತು ಈ ಬಗ್ಗೆ ಪ್ರಧಾನಿಗೆ ಮತ್ತೆ ಪತ್ರ ಬರೆಯುವುದಾಗಿಯೂ ಹೇಳಿದ್ದಾರೆ. ಅಷ್ಟೇ ಅಲ್ಲ, ಭ್ರಷ್ಟಾಚಾರ ಪ್ರಕರಣ ಒಂದರ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಅವಲೋಕನದಲ್ಲಿ ‘ಕರ್ನಾಟಕ ಸರ್ಕಾರದಲ್ಲಿ ಲಂಚದ ಹಣ ನಿಗದಿಯಾಗಿದೆ ಆ ಹಣವನ್ನು ಕೊಡದೆ ಕೆಲಸ ನಡೆಯಲು ಸಾಧ್ಯವಿಲ್ಲ’ ಎಂದು ಟೀಕಿಸಿರುವುದು ಕರ್ನಾಟಕವೇ ತಲೆ ತಗ್ಗಿಸಬೇಕಾದಂತಹ ವಿಚಾರ ಎಂದು ಅಬ್ದುಲ್ ಮಜೀದ್ ಅವರು ಬೇಸರ ವ್ಯಕ್ತಪಡಿಸಿದರು.

ಮಂತ್ರಿಯಾಗಿದ್ದ ಈಶ್ವರಪ್ಪ 40% ಕಮಿಷನ್ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘ ದೂರು ನೀಡಿತ್ತು. ಅದರ ಜೊತೆಗೆ ಬಿಜೆಪಿಯ ಸದಸ್ಯರೇ ಆಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಈ ಕುರಿತು ನೇರವಾಗಿ ಪ್ರಧಾನಿಯವರಿಗೇ ಪತ್ರ ಬರೆದಿದ್ದರು. ಆದರೆ ಪ್ರಾಧಾನಿ ಮೋದಿ ಅವರಿಂದ ಸಕಾರಾತ್ಮಕ ಉತ್ತರ ಸಿಗದ ಕಾರಣ ಕೊನೆಗೆ ಅವರು ಆತ್ಮಹತ್ಯೆಗೆ ಶರಣಾದರು. ಈ ಪ್ರಕರಣದ ತನಿಖೆ ಮಾಡಿದ ರಾಜ್ಯ ಸರ್ಕಾರದ ಸಿಐಡಿ ವಿಭಾಗ ಕೆಲವೇ ದಿನಗಳಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಅದರಲ್ಲಿ ಒಂದು ಮ್ಯಾಜಿಕ್ ಏನೆಂದರೆ ಇಂತಹ ಗಂಭೀರ ಪ್ರಕರಣದಲ್ಲಿ ಆರೋಪಗಳಿಗೆ ಗುರಿಯಾಗಿದ್ದ ಈಶ್ವರಪ್ಪ ಅವರನ್ನು ಒಂದೇ ಒಂದು ಬಾರಿಯೂ ವಿಚಾರಣೆ ಮಾಡದೆ ಸಿಐಡಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದು ಮಾತ್ರ ಸೋಜಿಗ ಎಂದು ಅವರು ಹೇಳಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವ ಸರ್ಕಾರವೂ ಕೂಡ ಈ ಮಟ್ಟದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಡಿಪಿಐ ರಾಜ್ಯದ ಈ ಬಿಜೆಪಿ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕೆಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡುತ್ತದೆ. ಜೊತೆಗೆ ಕರ್ನಾಟಕ ಸರ್ಕಾರದ ಮೇಲಿರುವ ಎಲ್ಲ ಭ್ರಷ್ಟಾಚಾರ ಆರೋಪಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಅಬ್ದುಲ್ ಮಜೀದ್  ಆಗ್ರಹಿಸಿದ್ದಾರೆ.

Join Whatsapp
Exit mobile version