Home ಟಾಪ್ ಸುದ್ದಿಗಳು ಅಯೋಧ್ಯೆ ರಾಮಮಂದಿರ ಟ್ರಸ್ಟ್ ಭ್ರಷ್ಟಾಚಾರ | ಸಾಧುಗಳಲ್ಲಿ ಒಡಕು

ಅಯೋಧ್ಯೆ ರಾಮಮಂದಿರ ಟ್ರಸ್ಟ್ ಭ್ರಷ್ಟಾಚಾರ | ಸಾಧುಗಳಲ್ಲಿ ಒಡಕು

ಲಖನೌ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿರುದ್ಧ ಭೂಮಿ ಖರೀದಿ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಬೆನ್ನಲ್ಲೆ, ಅಯೋಧ್ಯೆಯ ಸಾಧುಗಳ ಬಣಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ.

ವಿಶ್ವ ಹಿಂದೂ ಪರಿಷತ್‌ಗೆ (ವಿಎಚ್‌ಪಿ) ನಿಷ್ಠರಾಗಿರುವ ಸಾಧುಗಳ ಒಂದು ಬಣ ಟ್ರಸ್ಟ್‌ಗೆ ಬೆಂಬಲ ನೀಡಿದರೆ, ಮತ್ತೊಂದು ಬಣವು ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಮಹಾಂತ ಧರ್ಮ ದಾಸ್ ನೇತೃತ್ವದಲ್ಲಿ ಮಂಗಳವಾರ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ ಸಾಧುಗಳ ಗುಂಪೊಂದು ಭ್ರಷ್ಟಾಚಾರ ಆರೋಪದ ತನಿಖೆ ನಡೆಸಲು ಹನುಮಾನ್ ದೇವರಿಗೆ ಮನವಿ ಪತ್ರವೊಂದನ್ನು ಸಮರ್ಪಿಸಿದೆ.

‘ರಾಮಮಂದಿರ ನಿರ್ಮಾಣಕ್ಕೆ ಜನರು ಹಣವನ್ನು ದೇಣಿಗೆ ನೀಡಿದ್ದಾರೆ. ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರವು ಈ ಬಗ್ಗೆ ತನಿಖೆ ನಡೆಸಬೇಕು’ ಎಂದೂ ಮಹಾಂತ ಧರ್ಮ ದಾಸ್ ಅವರು ಒತ್ತಾಯಿಸಿದ್ದಾರೆ. ಇದನ್ನು ಬೆಂಬಲಿಸಿರುವ ಮತ್ತೊಬ್ಬ ಸಾಧು ಮಹಾಂತ ದಿಲೀಪ್ ದಾಸ್ ಅವರು ಕೂಡಾ ತನಿಖೆಗೆ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹಿಂದೂ ರಕ್ಷಾ ಸೇನಾದ ಅಧ್ಯಕ್ಷ ಸ್ವಾಮಿ ಪ್ರಮೋದ್ ಆನಂದ್ ಗಿರಿ ಅವರು, ಟ್ರಸ್ಟ್ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದು, ಈ ಬಗ್ಗೆ ಪ್ರಶ್ನಿಸಿದವರನ್ನು ಹಿಂದೂ ವಿರೋಧಿ ಗ್ಯಾಂಗ್‌ನ ಸದಸ್ಯರು ಎಂದು ದೂರಿದ್ದಾರೆ.

ಎಎಪಿ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಮುಖಂಡ ತೇಜ್ ನಾರಾಯಣ್ ಪಾಂಡೆ ಅವರು, ‘₹2 ಕೋಟಿ ಮೌಲ್ಯದ ಜಮೀನನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ₹ 18.5 ಕೋಟಿಗೆ ಖರೀದಿಸಿದೆ’ ಎಂದು ಆರೋಪಿಸಿದ್ದಾರೆ.ಅಲ್ಲದೆ, ‘ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಅವರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದೂ ಒತ್ತಾಯಿಸಿದ್ದಾರೆ.
ಆರೋಪ ನಿರಾಕರಣೆ: ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಚಂಪತ್ ರಾಯ್ ಅವರು, ‘ಮಾರುಕಟ್ಟೆಯ ಮೌಲ್ಯಕ್ಕಿಂತ ಕಡಿಮೆ ದರದಲ್ಲಿಯೇ ಭೂಮಿಯನ್ನು ಖರೀದಿಸಲಾಗಿದೆ. ಈ ಬಗ್ಗೆ ನಮ್ಮಲ್ಲಿ ಎಲ್ಲಾ ದಾಖಲೆಗಳಿವೆ. ಇದು ಟ್ರಸ್ಟ್ ನ್ನು ಕೆಣಕುವ ರಾಜಕೀಯ ಪಿತೂರಿ’ ಎಂದಿದ್ದಾರೆ.

Join Whatsapp
Exit mobile version