ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಫೆಬ್ರವರಿ 18ರಂದು ಗುರುವಾರ ರಾಜ್ಯಾದ್ಯಂತ ರೈಲು ತಡೆ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ರೈತ ಚಳವಳಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಸಮಸ್ಯೆ ಬಗೆಹರಿಸುವ ಬದಲು ನಾಟಕೀಯವಾಗಿ ವರ್ತಿಸುತ್ತಿದೆ. ಇದನ್ನು ಖಂಡಿಸಿ ದೇಶಾದ್ಯಂತ 18ರಂದು 12ಗಂಟೆಯಿಂದ ಮೂರು ಗಂಟೆ ತನಕ ರೈಲು ತಡೆ ಚಳವಳಿ ನಡೆಸಲು ಕರೆ ನೀಡಿರುವುದನ್ನು ಬೆಂಬಲಿಸಿ ಕರ್ನಾಟಕದಲ್ಲಿಯೂ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದಿಂದ ಚಳವಳಿ ನಡೆಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ ಎಮ್ಮೆ ಚರ್ಮದ ಸರ್ಕಾರ, ಮಳೆ ಚಳಿ ಗಾಳಿ ಬಿಸಿಲು ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರಧಾನಿ ಮೋದಿಯವರು ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದಾರೆ. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶ ರಂಜನ್ ಗೊಗಯ್ ಕೂಡ ಬಡಜನರಿಗೆ ದುಡಿಯುವ ವರ್ಗಕ್ಕೆ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದು ಕಷ್ಟಕರವಾಗಿದೆ ಎನ್ನುತ್ತಾರೆ. ಪ್ರಜಾಪ್ರಭುತ್ವ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಾಗುತ್ತಿದೆ, ಬಂಡವಾಳಶಾಹಿಗಳ ಶ್ರೀಮಂತರ ವಶಕ್ಕೆ ಸಿಲುಕುತ್ತಿದೆ, ಇಂಥ ವಿಚಾರಗಳ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.