Home ಟಾಪ್ ಸುದ್ದಿಗಳು ಇತಿಹಾಸದಲ್ಲಿ ಪುರಾತನ ದೇಗುಲಗಳ ಹಿಂದೆ ಜನರನ್ನು ವಿಭಜಿಸಿದ ಕತೆಗಳಿಲ್ಲ ; ಕುಮಾರಸ್ವಾಮಿ ತಿರುಗೇಟು

ಇತಿಹಾಸದಲ್ಲಿ ಪುರಾತನ ದೇಗುಲಗಳ ಹಿಂದೆ ಜನರನ್ನು ವಿಭಜಿಸಿದ ಕತೆಗಳಿಲ್ಲ ; ಕುಮಾರಸ್ವಾಮಿ ತಿರುಗೇಟು

ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಮ್ಮ ಹೇಳಿಕೆಗೆ ಬದ್ಧವಿರುವುದಾಗಿ ತಿಳಿಸಿದ್ದು, ರಾಮನ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧ ಇದೆ ಎಂದು ಪುನರುಚ್ಛರಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಗುರುತಿಸಿರುವ ಧಾರ್ಮಿಕ ಮುಖಂಡರೊಬ್ಬರು ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮನ ಭಕ್ತಿಯು ಹಣ, ಅಧಿಕಾರ, ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆದಿದ್ದರೆ, ಅದು ಅವರ ಜವಾಬ್ದಾರಿಯ ಸಮರ್ಥ ನಿರ್ವಹಣೆ ಆಗಿರುತ್ತಿತ್ತು. ಅದು ಬಿಟ್ಟು ರಾಜಕೀಯದ ಹೇಳಿಕೆ ನೀಡುವುದು ಧಾರ್ಮಿಕ ನಾಯಕರಿಗೆ ಶೋಭೆಯಲ್ಲ ಎಂದು ಕುಟುಕಿದ್ದಾರೆ.

ಒಬ್ಬರು ಹೇಳಿದ್ದಾರೆ, ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ಕುಮಾರಸ್ವಾಮಿ ದೇಣಿಗೆ ನೀಡಲಿ ಎಂದು. ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ. ನಮ್ಮೆಲ್ಲರ ಭಕ್ತಿ, ಭಾವನೆಗಳನ್ನು ಹಣವಾಗಿ, ಅಧಿಕಾರವಾಗಿ ಪರಿವರ್ತಿಸುವ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಆಗಾಗ್ಗೆ ಈ ಮಾತು ಹೇಳುತ್ತಿರುತ್ತೇನೆ. ನಮ್ಮ ನಡುವಿನ ನಿಷ್ಕಪಟ, ಕಳಂಕವಿಲ್ಲದ ಜಾತ್ಯತೀತವಾದಿ ದೇವೇಗೌಡರು. ತಮ್ಮ ಧರ್ಮದ ಬಗ್ಗೆ ಆಳವಾದ ನಂಬಿಕೆ ಇದ್ದೂ, ಪರಧರ್ಮದ ಬಗ್ಗೆ ಅಪಾರ ಗೌರವ ಉಳ್ಳವರವರು. ಅವರಷ್ಟು ದೈವತ್ವ ನಂಬಿದವರು, ದೇಗುಲ ನೋಡಿದವರು ಇನ್ನೊಬ್ಬರಿಲ್ಲ. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು ಎಂದು ಹರಿಹಾಯ್ದಿದಿದ್ದಾರೆ.

ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾಶಿರ್ವಾದದಿಂದ 2 ಬಾರಿ ಸಿಎಂ ಆದ ನಾನು ಇನ್ನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇತಿಹಾಸ ಹೇಳುತ್ತಾ ನಿಂತಿರುವ ಪುರಾತನ ದೇಗುಲಗಳ ಹಿಂದೆ ಜನರನ್ನು ವಿಭಜಿಸಿದ ಕತೆಗಳಿಲ್ಲ. ಆ ದೇಗುಲಗಳ ನಿರ್ಮಾಣಕ್ಕಾಗಿ ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿದ ಉಲ್ಲೇಖವಿಲ್ಲ. ದೇವರನ್ನು ರಾಜಕೀಯಕ್ಕಾಗಿ ಉಪಯೋಗಿಸಿಕೊಂಡ ಉಲ್ಲೇಖವಿರುವ ಒಂದೇ ಒಂದು ಶಾಸನ ನಮಗೆ ಸಿಕ್ಕಿಲ್ಲ. ಈಗ ಇಂಥ ಕೃತ್ಯ ಮಾಡುತ್ತಿರುವವರು ದಯವಿಟ್ಟು ನಿಲ್ಲಿಸಿ. ಈ ವಿಚಾರವಾಗಿ ಮಕ್ಕಳು-ಮರಿಗಳಿಗೆ, ಅಪ್ಪನ ಅಧಿಕಾರದ ಹಿಂದೆ ಅಡಗಿ ದುಡ್ಡು ಕೊಳ್ಳೆ ಹೊಡೆಯುತ್ತಿರುವ ಸ್ವಘೋಷಿತ ನವ ಇಲಿಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಇಷ್ಟು ಹೇಳಿಯೂ ಅರ್ಥವಾಗದವರಿಗೆ ಹೇಳುವುದು ಇಷ್ಟೆ-ರಾಮಮಂದಿರ ಹಿಂದೂಗಳ ಭಕ್ತಿ, ಭಾವನೆಗಳ ಮೂರ್ತ ರೂಪ ಅದು ಆಗಬೇಕು. ಆದರೆ ಅದೇ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Join Whatsapp
Exit mobile version