ನವದೆಹಲಿ, ಆ.4: ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಒಂಬತ್ತು ವರ್ಷದ ದಲಿತ ಬಾಲಕಿಯ ನಿವಾಸಕ್ಕೆ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿ, ಸಾಂತ್ವನ ಹೇಳಿ, ನ್ಯಾಯ ದೊರಕಿಸಿಕೊಡಲು ಕುಟುಂಬದ ಜೊತೆ ನಿಲ್ಲುವುದಾಗಿ ಆಶ್ವಾಸನೆ ನೀಡಿದ್ದಾರೆ.
“ತಮಗೆ ಸಹಾಯ ಮಾಡುವುದು ನನ್ನ ಕರ್ತವ್ಯ” ಎಂದು ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿದರು.
ಆ ಬಾಲಕಿಯ ಹೆತ್ತವರ ಕಣ್ಣೀರು ಮಾತ್ರ ಕೇಳುತ್ತಿತ್ತು, ನ್ಯಾಯಕ್ಕಾಗಿ ಅವರು ಕಾಯುತ್ತಿದ್ದಾರೆ. ನಾನು ಈ ವಿಷಯದಲ್ಲಿ ಅವರ ಬೆಂಬಲಕ್ಕಿದ್ದೇನೆ ಎಂದು ರಾಹುಲ್ ಆಮೇಲೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಮಹಿಳಾ ಆಯೋಗವು ಈ ಸಂಬಂಧ ತನಿಖೆ ಆರಂಭಿಸಿದೆ. ಈ ದುರಂತವು ವಾಯವ್ಯ ದೆಹಲಿಯ ಹಳೆಯ ನಂಗಲ್ ಪ್ರದೇಶದಲ್ಲಿ ನಡೆದಿದೆ.
ನಮ್ಮ ಮಗಳನ್ನು ಅತ್ಯಾಚಾರಗೈದು ಕೊಲೆ ಮಾಡಿ, ಬಲವಂತವಾಗಿ ಸುಟ್ಟು ಹಾಕಿದ್ದಾರೆ. ಪುರೋಹಿತನೊಬ್ಬ ವಿದ್ಯುತ್ ಆಘಾತ ಸಾವಿಗೆ ಕಾರಣ ಎಂದು ಸುಳ್ಳು ಹೇಳುತ್ತಿದ್ದಾನೆ ಎಂದು ಹುಡುಗಿಯ ಹೆತ್ತವರು ಆರೋಪಿಸಿದ್ದಾರೆ.
ದೇಶದ ರಾಜಧಾನಿಯ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಪ್ರತಿಪಕ್ಷಗಳು ಗೃಹ ಸಚಿವ ಅಮಿತ್ ಶಾ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ರಾಹುಲ್ ಗಾಂಧಿಯವರು ಟ್ವೀಟ್ ನಲ್ಲಿ ದಲಿತನ ಮಗಳು, ಈ ದೇಶದ ಮಗಳೂ ಹೌದು ಎಂದು ಹೇಳಿದ್ದಾರೆ.