ಮಧುರೈ, ಆ. 4: 2021ರಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಲ್ಲ’ ಎಂಬ ಷರತ್ತು ವಿಧಿಸಿ ಎಚ್ ಡಿಎಫ್ ಸಿ ಬ್ಯಾಂಕ್ ನೀಡಿದ್ದ ಉದ್ಯೋಗ ಸಂಬಂಧಿತ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳ ನಡುವೆ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಆದರೆ ಈ ಬಗ್ಗೆ ಕ್ಷಮೆಯಾಚಿಸಿರುವ ಎಚ್ ಡಿಎಫ್ ಸಿ ಬ್ಯಾಂಕ್, ಇದು ಟೈಪಿಂಗ್ ಮಿಸ್ಟೇಕ್. 28 ವರ್ಷ ವಯಸ್ಸು ಮೀರದ ಯಾವುದೇ ಬ್ಯಾಚಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟೀಕರಣಕೊಟ್ಟಿದೆ.
ತಮಿಳುನಾಡಿನ ಮಧುರೈನಲ್ಲಿ ಬುಧವಾರ ನಡೆಯಬೇಕಾಗಿದ್ದ ಸಂದರ್ಶನಕ್ಕೆ ತಮಿಳು ದಿನಪತ್ರಿಕೆಯೊಂದರಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಜಾಹೀರಾತು ನೀಡಿತ್ತು.
ವಾಕ್ ಇನ್ ಇಂಟರ್ ವ್ಯೂ ಫಾರ್ ಗ್ರಾಜ್ಯುವೇಟ್ಸ್’ ಎಂಬ ಶೀರ್ಷಿಕೆಯಡಿ ನೀಡಿದ್ದ ಜಾಹೀರಾತಿನಲ್ಲಿ ಉದ್ಯೋಗಕ್ಕಾಗಿ ಪದವಿ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದ್ದ ಎಚ್ ಡಿಎಫ್ ಸಿ ಬ್ಯಾಂಕ್, ವಯಸ್ಸು 28 ವರ್ಷ ಮೀರಿರಬಾರದು ಎಂದು ಹೇಳಿದ್ದ ಬಳಿಕ 2021ರಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಲ್ಲ ಎಂಬ ಷರತ್ತನ್ನೂ ಹಾಕಿದ್ದರು.
ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು, ತಪ್ಪಿಗಾಗಿ ಕ್ಷಮೆ ಕೇಳಿದ್ದಾರೆ. ಬಳಿಕ 2021ರ ಬ್ಯಾಚಿನ ಅಭ್ಯರ್ಥಿಗಳು ಕೂಡ ಅರ್ಹರು ಎಂದು ಹೊಸ ಜಾಹೀರಾತು ನೀಡಿದ್ದಾರೆ.