ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಚೀನಾ ಗಡಿ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ರೀತಿಯ ವಿರುದ್ಧ ಟೀಕೆಯನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಾರ್ವಜನಿಕ ಸಂಪರ್ಕ ನಿರ್ವಹಣೆ ಮತ್ತು ಮಾಧ್ಯಮ ಕುಶಲತೆಯ ಮೂಲಕ ಬೀಜಿಂಗ್ ಬೌಗೋಳಿಕ ರಾಜಕೀಯ ತಂತ್ರಗಾರಿಕೆಯ ಬೆದರಿಕೆಯನ್ನು ಎದುರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಭೂತಾನ್ ಮತ್ತು ಚೀನಾ ನಡುವಿನ ಗಡಿ ಸಮೀಪದ ಸ್ಪರ್ಧಾತ್ಮಕ ಡೋಕ್ಲಾಮ್ ಪ್ರಸ್ಥಭೂಮಿಯ ಪರಿಧಿಯಲ್ಲಿರುವ ಸಿಂಚೆ ಲಾ ಪಾಸ್ ನಿಂದ ಕೇವಲ 2.5 ಕಿ.ಮೀ ದೂರದಲ್ಲಿ ಚೀನಾ ಸೇನೆಯು ಯುದ್ಧ ಸಾಮಾಗ್ರಿ ಸಂಗ್ರಹ ಸೌಲಭ್ಯಗಳನ್ನು ನಿರ್ಮಿಸುತ್ತಿದೆ ಎಂದು ಹೇಳುವ ಎನ್.ಡಿ.ಟಿ.ವಿಯ ವರದಿಯೊಂದನ್ನು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
“ಪಿಆರ್ ನಿರ್ವಹಣೆಯ ಮಾಧ್ಯಮ ತಂತ್ರಗಾರಿಕೆಯಿಂದ ಚೀನಾದ ಭೌಗೋಳಿಕ ರಾಜಕೀಯ ತಂತ್ರವನ್ನು ಎದುರಿಸಲು ಸಾಧ್ಯವಿಲ್ಲ” ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ. “ಈ ಸರಳ ಸಂಗತಿಯು ಭಾರತ ಸರಕಾರವನ್ನು ನಡೆಸುವವರ ಮನಸ್ಸಿನಿಂದ ನುಣುಚಿಕೊಳ್ಳುತ್ತದೆ” ಎಂದು ಅವರು ಬರೆದಿದ್ದಾರೆ.
ಎನ್.ಡಿ.ಟಿ.ವಿ ಪಡೆದ ಸ್ಯಾಟಲೈಟ್ ಚಿತ್ರಗಳು 2017ರಲ್ಲಿ ಭಾರತ ಮತ್ತು ಚೀನಾ ಪಡೆಗಳು ಕಾದಾಡಿದ ಡೋಕ್ಲಾ ದಿಂದ 7 ಕಿ.ಮೀ ದೂರದಲ್ಲಿ ಮಿಲಿಟರಿ ಗ್ರೇಡ್, ಕಠಿಣ ಸ್ಫೋಟಕ ಬಂಕರ್ ಗಳನ್ನು ನಿರ್ಮಿಸಲಾಗಿರುವುದನ್ನು ತೋರಿಸುತ್ತದೆ.