ನವದೆಹಲಿ: ಸೋಲಾರ್ ಹೀಟರ್ ಗಳಿಗೆ 12%, ಎಲ್ ಇಡಿಗಳಿಗೆ 18%, ಮಜ್ಜಿಗೆ ಮೊಸರು ಪದಾರ್ಥಗಳಿಗೆ 5% ರಷ್ಟು ಜಿಎಸ್ ಟಿ ಏರಿಕೆ ಮತ್ತು ಹೊಸ ಹೇರಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗಬ್ಬರ್ ಸಿಂಗ್ ದಾಳಿಗೆ ಹೋಲಿಸಿದ್ದಾರೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಉಸಿರುಗಟ್ಟಿಸುವ ಬೇಜವಾಬ್ದಾರಿ ಹೇರಿಕೆ ಎಂದು ಹೊಸ ಜಿಎಸ್ ಟಿಯನ್ನು ಟೀಕಿಸಿದ್ದಾರೆ.
ಜಗತ್ತಿನಲ್ಲೇ ಅತಿ ವೇಗವಾಗಿ ಆದಾಯ ಹೆಚ್ಚಿಸುವ ಯೋಜನೆಯನ್ನು ಹಾಕಿಕೊಂಡಿರುವ ಮೋದಿ ಸರಕಾರವು ಜಿಎಸ್ ಟಿ ದರಗಳನ್ನು ಮತ್ತೆ ಏರಿಸಿದೆ ಹಾಗೂ ಕೆಲವು ಪದಾರ್ಥಗಳನ್ನು ಹೊಸದಾಗಿ ಜಿಎಸ್ ಟಿ ವ್ಯಾಪ್ತಿಗೆ ತಂದಿದ್ದನ್ನು ಟ್ವೀಟ್ ಮೂಲಕ ಟೀಕಿಸಿದ್ದಾರೆ.
ಇವನ್ನು ಗಬ್ಬರ್ ಸಿಂಗ್ ತೆರಿಗೆ ಎಂದು ಬರೆದಿರುವ ರಾಹುಲ್ ಗಾಂಧಿಯವರು “ತೆರಿಗೆ ಹೆಚ್ಚಳ, ಉದ್ಯೋಗ ಇಲ್ಲ. ಒಮ್ಮೆ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿದ್ದ ಭಾರತದ ಆರ್ಥಿಕತೆಯನ್ನು ಹೇಗೆ ನಾಶ ಮಾಡಬೇಕು ಎಂಬುದರಲ್ಲಿ ಬಿಜೆಪಿಯರಿಂದ ಕಲಿಯಬೇಕು” ಎಂದು ರಾಹುಲ್ ಕುಟುಕಿದ್ದಾರೆ.
ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಜಿಎಸ್ ಟಿ ಕೌನ್ಸಲ್ ನಲ್ಲಿ ಇವನ್ನೆಲ್ಲ ಪ್ರಕಟಿಸಿ, ಜಾರಿಗೂ ತಂದಾಯಿತು. ಹಾಲು, ಮೊಸರು, ಪನೀರ್ ನಂಥವು ಪ್ಯಾಕ್ ಮಾಡಿದ, ಅಕ್ಕಿ, ಗೋಧಿಯಂಥವು 5% ಜಿಎಸ್ ಟಿ, ಚೆಕ್ ಬಳಕೆಗೂ 12% ಜಿಎಸ್ ಟಿ ಹೊಸದಾಗಿ ಹೇರಲಾಗಿದೆ.
“ಹೆಚ್ಚಿನ ಭಾರತೀಯರು ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾಲಘಟ್ಟದಲ್ಲಿ ಈ ಜಿಎಸ್ ಟಿ ಹೇರಿಕೆಯು ಜನರ ಉಸಿರುಗಟ್ಟಿಸುವ ಬೇಜವಾಬ್ದಾರಿತನವಾಗಿದೆ. ಹಣದುಬ್ಬರವು ಆದಾಯವನ್ನು ಮುಕ್ಕುತ್ತಿರುವ ಸಮಯದಲ್ಲಿ ಜನಸಾಮಾನ್ಯನ ಹೊರೆಯನ್ನು ಅವನು ಹೊರಲಾಗದಷ್ಟು ಮಾಡಲಾಗಿದೆ. ಈ ಸರಕಾರ ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲೆ ಎಂದು ತಿಳಿದಿದೆಯೇ” ಎಂದು ಹಿರಿಯ ಕಾಂಗ್ರೆಸ್ಸಿಗ ಶಶಿ ತರೂರ್ ಪ್ರಶ್ನಿಸಿದ್ದಾರೆ.