ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯು ಪ್ರಸ್ತುತ ರಾಜಸ್ಥಾನದಲ್ಲಿ ಸಾಗುತ್ತಿದ್ದು, ಬುಧವಾರ ಬೆಳಗ್ಗೆ ಆರ್ ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ರಾಜಸ್ಥಾನದ ಸವಾಯಿ ಮಾಧೋಪುರದ ಭಡೋತಿಯಿಂದ ಬೆಳಗ್ಗೆ ಯಾತ್ರೆ ಪ್ರಾರಂಭಗೊಂಡಿದ್ದು, ರಾಹುಲ್ ಗಾಂಧಿ ಹಾಗೂ ಸಚಿನ್ ಪೈಲಟ್ ಅವರೊಂದಿಗೆ ರಘುರಾಮ್ ರಾಜನ್ ಅವರು ಯಾತ್ರೆಯಲ್ಲಿ ಕಾಣಿಸಿಕೊಂಡರು.
ಈ ಹಿಂದೆ 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟು ಅಮಾನ್ಯೀಕರಣ ನಿರ್ಧಾರವನ್ನು ರಘುರಾಮ್ ರಾಜನ್ ಟೀಕಿಸಿದ್ದರು ಮತ್ತು ದೇಶದ ಆರ್ಥಿಕ ಬೆಳವಣಿಗೆ ಮತ್ತು ವಿತ್ತೀಯ ಕೊರತೆ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದರು.
ರಘುರಾಂ ರಾಜನ್ ಮತ್ತು ರಾಹುಲ್ ಗಾಂಧಿ ಇಬ್ಬರೂ ಈ ನಡಿಗೆಯ ವೀಡಿಯೋವನ್ನು ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಡೆಯುವಾಗಲೇ ರಘುರಾಂ ರಾಜನ್ ಮತ್ತು ರಾಹುಲ್ ಗಾಂಧಿಯವರು ದೇಶದ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿರುವುದು ಕಂಡು ಬಂದಿದೆ.
ಈ ವೇಳೆ ಹೆಚ್ಚಿನ ಜನರು ನಡಿಗೆಯಲ್ಲಿ ಒಂದಾದುದು ಕಂಡು ಬಂದಿದೆ. ದೇಶವು ಎದುರಿಸುತ್ತಿರುವ ದ್ವೇಷದ ವಾತಾವರಣದಿಂದ ದೇಶವನ್ನು ಮುಕ್ತಗೊಳಿಸುವಲ್ಲಿ ನಾವು ಸಫಲರಾಗುತ್ತೇವೆ ಎಂಬ ಘೋಷಣೆ ನಡಿಗೆಯಲ್ಲಿ ಕೇಳಿಬಂತು. ಕಾಂಗ್ರೆಸ್ ಪಕ್ಷವು ಅದನ್ನೇ ಟ್ವೀಟ್ ಮಾಡಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಉದ್ದಕ್ಕೂ ನಾನಾ ರಂಗದ ಕಾಂಗ್ರೆಸ್ಸೇತರ ಮತ್ತು ರಾಜಕೀಯ ಪಕ್ಷಗಳಿಗೆ ಸೇರದವರು ಸೇರಿಕೊಂಡು ಅಲ್ಲಲ್ಲಿ ನಡೆದಿದ್ದಾರೆ. 2023ರ ಜನವರಿ 26ರ ಹೊತ್ತಿಗೆ ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಕೊನೆಗೊಳ್ಳುತ್ತದೆ.