ದುಬೈ: ‘ಬ್ಯ್ಲಾಕ್ ಲೀವ್ಸ್ ಮ್ಯಾಟರ್ಸ್’ ಅಭಿಯಾನದ ಅಂಗವಾಗಿ ಪಂದ್ಯಕ್ಕೂ ಮೊದಲು ಮಂಡಿಯೂರಲು ನಿರಾಕರಿಸಿ ತಂಡದ ಆಡುವ ಬಳಗದಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ತನ್ನ ನಿಲುವಿಗೆ ಕ್ಷಮೆಯಾಚಿಸಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳು ಆರಂಭವಾಗುವ ವೇಳೆ ಉಭಯ ತಂಡಗಳ ಆಟಗಾರರು ಜನಾಂಗಭೇದ ನೀತಿಯ ವಿರುದ್ಧ ಸಂದೇಶ ಸಾರುವ ನಿಟ್ಟಿನಲ್ಲಿ ಮೊಣಕಾಲೂರಿ ಬೆಂಬಲ ಸೂಚಿಸುತ್ತಾರೆ. ಆದರೆ ತಂಡದ ಆಡಳಿತ ಮಂಡಳಿಯ ಸೂಚನೆಯ ಬಳಿಕವೂ ಟಿ-20 ವಿಶ್ವಕಪ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮಂಡಿಯೂರಲು ನಿರಾಕರಿಸಿದ್ದ ಡಿ ಕಾಕ್ ಪಂದ್ಯದಿಂದ ಹೊರಗುಳಿದಿದ್ದರು. ಡಿ ಕಾಕ್ ನಿಲುವು ವ್ಯಾಪಕ ಚರ್ಚೆಗೆ ಒಳಪಟ್ಟಿತ್ತು.
ತನ್ನ ನಿಲುವು ಬದಲಾಯಿಸದಿದ್ದರೆ ತಂಡದಿಂದ ಖಾಯಂ ಆಗಿ ಹೊರಗುಳಿಯುವ ಸೂಚನೆ ಡಿ ಕಾಕ್’ಗೆ ಸಿಕ್ಕಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿ ಕಾಕ್ ಕ್ಷಮೆ ಕೇಳುವ ಮೂಲಕ ತಂಡಕ್ಕೆ ಮರಳುವ ಸೂಚನೆ ನೀಡಿದ್ದಾರೆ.
“ಮೊದಲನೆಯದಾಗಿ ತಂಡದ ಸಹ ಆಟಗಾರರೊಂದಿಗೆ, ಅಭಿಮಾನಿಗಳ ಜೊತೆ ನಾನು ಕ್ಷಮೆ ಕೇಳುತ್ತಿದ್ದೇನೆ. ಜನಾಂಗಭೇದ ನೀತಿಯ ವಿರುದ್ಧದ ಹೋರಾಟದ ಪ್ರಾಮುಖ್ಯತೆಯನ್ನು ನಾನು ಅರ್ಥೈಸಿಕೊಂಡಿದ್ದೇನೆ. ಆಟಗಾರರರಾಗಿ ನಾವು ಈ ವಿಷಯದಲ್ಲಿ ವಹಿಸಬೇಕಾದ ಜವಾಬ್ಧಾರಿ ಹಾಗೂ ಸಮಾಜಕ್ಕೆ ಕೊಡಬೇಕಾದ ಸಂದೇಶದ ಬಗ್ಗೆಯೂ ನನಗೆ ಅರಿವಿದೆ. ನಾನು ಮಂಡಿಯೂರುವ ಕಾರಣದಿಂದಾಗಿ ಇತರರು ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳುವುದಾದರೆ ಹಾಗೂ ಇತರರ ಬದುಕು ಹಸನಾಗುವುದಾದರೆ ನಾನು ಮಂಡಿಯೂರಲು ಅತ್ಯಂತ ಹೆಚ್ಚು ಸಂತೋಷ ಪಡುತ್ತೇನೆ ಎಂದು ಕ್ವಿಂಟನ್ ಡಿ ಕಾಕ್ ಹೇಳಿದ್ದಾರೆ.
ಮೊದಲನೇ ಪಂದ್ಯದ ಬಳಿಕ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣಯೆ ಸೂಚನೆ ನೀಡದೇ ಇದ್ದ ಡಿ ಕಾಕ್, ವಿಶ್ವಕಪ್ ಟೂರ್ನಿಯನ್ನೇ ತ್ಯಜಿಸಿ ತವರಿಗೆ ಮರಳುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೆ ಡಿ ಕಾಕ್ ಕ್ಷಮೆ ಕೇಳುವ ಮೂಲಕ ದಕ್ಷಿಣ ಆಫ್ರಿಕ ತಂಡದ ಆಡಳಿತ ಮಂಡಳಿ ಹಾಗೂ ಅಭಿಮಾನಿಗಳು ನಿರಾಳರಾಗಿದ್ದಾರೆ. ಅಕ್ಟೋಬರ್ 30ರಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ ತಂಡವನ್ನು ಎದುರಿಸಲಿದೆ.