Home ಟಾಪ್ ಸುದ್ದಿಗಳು ಕತಾರ್ ಫಿಫಾ ವಿಶ್ವಕಪ್ | 30 ಅಡಿ ಮೆಸ್ಸಿ ಕಟೌಟ್ ವೈರಲ್ ಆದ ಬೆನ್ನಲ್ಲೇ 40...

ಕತಾರ್ ಫಿಫಾ ವಿಶ್ವಕಪ್ | 30 ಅಡಿ ಮೆಸ್ಸಿ ಕಟೌಟ್ ವೈರಲ್ ಆದ ಬೆನ್ನಲ್ಲೇ 40 ಅಡಿ ಕಟೌಟ್ ಕೌಂಟರ್ ಕೊಟ್ಟ ಬ್ರೆಝಿಲ್ ಅಭಿಮಾನಿಗಳು !

ಕೋಝಿಕ್ಕೋಡ್: ಫಿಫಾ ಫುಟ್ ಬಾಲ್ ವಿಶ್ವಕಪ್ ಟೂರ್ನಿಯ 22ನೇ ಆವೃತ್ತಿಗೆ, ಗಲ್ಫ್ ರಾಷ್ಟ್ರ ಕತಾರ್ ನಲ್ಲಿ ನವೆಂಬರ್ 20ರಂದು ಚಾಲನೆ ದೊರೆಯಲಿದೆ. 4 ವರ್ಷಗಳಿಗೊಮ್ಮೆ ನಡೆಯುವ ಮಹಾಕೂಟದಲ್ಲಿ ಈ ಬಾರಿ 32 ರಾಷ್ಟ್ರಗಳು ಭಾಗವಹಿಸಲಿವೆ. ಡಿಸೆಂಬರ್ 18 ರವರೆಗೆ ನಡೆಯುವ ಕತಾರ್ ವಿಶ್ವಕಪ್ ನ ಒಟ್ಟು 64 ಪಂದ್ಯಗಳನ್ನು ಒಳಗೊಂಡಿದೆ.

ಭಾರತದಲ್ಲಿ ಕ್ರಿಕೆಟ್ ಮೇಲಿನ ಪ್ರೀತಿ ಹೆಚ್ಚಾಗಿದ್ದರೂ ಕೇರಳ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಫುಟ್ ಬಾಲ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಫುಟ್ ಬಾಲ್ ವಿಶ್ವಕಪ್ ಗೆ ದಿನಗಣನೆ ಆರಂಭವಾಗುತ್ತಿದ್ಧಂತೆಯೇ ಕೇರಳದಲ್ಲಿ ಅರ್ಜೆಂಟೀನಾ ಮತ್ತು ಬ್ರೆಝಿಲ್ ತಂಡಗಳ ಅಭಿಮಾನಿಗಳ ನಡುವೆ ಕಟೌಟ್ ವಾರ್ ಶುರುವಾಗಿದೆ.

ಕೋಝಿಕ್ಕೋಡ್ ಜಿಲ್ಲೆಯ ಪುಲ್ಲಾವೂರ್ ಗ್ರಾಮದಲ್ಲಿ, ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ ಅಭಿಮಾನಿಗಳು ಕೆಲ ದಿನಗಳ ಹಿಂದೆ ಕುರುಂಗಟ್ಟು ಕಡವು ನದಿಯ ಮಧ್ಯೆ 30 ಅಡಿ ಎತ್ತರದ ಬೃಹತ್ ಕಟೌಟ್ ಸ್ಥಾಪಿಸಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ಧಂತೆಯೇ ಎಚ್ಚೆತ್ತ ಬ್ರಝಿಲ್ ಅಭಿಮಾನಿಗಳು ಅದೇ ನದಿಯ ದಡದಲ್ಲಿ 40 ಅಡಿ ಎತ್ತರದ ನೇಮರ್ ಕಟೌಟ್ ನಿಲ್ಲಿಸಿದ್ದಾರೆ. ಇದೀಗ ಈ ಎರಡೂ ಕಟೌಟ್ ಗಳ ಫೋಟೋ-ವೀಡಿಯೋಗಳು ವೈರಲ್ ಆಗಿದ್ದು, ಭಾರಿ ಸುದ್ದಿಯಾಗುತ್ತಿದೆ.

ಅರ್ಜೆಂಟೀನಾ ಮತ್ತು ಬ್ರೆಝಿಲ್ ತಂಡಗಳಿಗೆ ಕೇರಳದಲ್ಲಿ ಅತಿಹೆಚ್ಚು ಅಭಿಮಾನಿಗಳಿದ್ದಾರೆ. ಉಳಿದ ಸಮಯದಲ್ಲಿ ಮೆಸ್ಸಿ-ರೊನಾಲ್ಡೊ-ನೇಮರ್ ಅಭಿಮಾನಿಗಳಾಗಿರುವವರು ಫುಟ್ಬಾಲ್ ವಿಶ್ವಕಪ್ ಸಂದರ್ಭದಲ್ಲಿ ಅರ್ಜೆಂಟೀನಾ- ಬ್ರೆಝಿಲ್ ತಂಡಗಳ ಬೆಂಬಲಕ್ಕೆ ನಿಲ್ಲುತ್ತಾರೆ. ಪ್ರತಿ ವಿಶ್ವಕಪ್ ನ ದಿನಗಳಲ್ಲಿ ಕಾಣುವ ರೀತಿಯಲ್ಲೇ ಈ ಬಾರಿಯೂ ಅಭಿಮಾನಿಗಳ ಉತ್ಸಾಹಕ್ಕೆ ಯಾವುದೇ ಕೊರತೆಯಿಲ್ಲ.

Join Whatsapp
Exit mobile version