Home ಕರಾವಳಿ ಪುತ್ತೂರು: ನೈತಿಕ ಪೊಲೀಸ್ ಗಿರಿ ಮಾಡಿ, ಸಾಮರಸ್ಯ ಕದಡಲು ಯತ್ನಿಸಿದ ಆರೋಪಿಗಳ ಬಂಧನ

ಪುತ್ತೂರು: ನೈತಿಕ ಪೊಲೀಸ್ ಗಿರಿ ಮಾಡಿ, ಸಾಮರಸ್ಯ ಕದಡಲು ಯತ್ನಿಸಿದ ಆರೋಪಿಗಳ ಬಂಧನ

0

ಪುತ್ತೂರು: ನೈತಿಕ ಪೊಲೀಸ್ ಗಿರಿ ಮಾಡಿದ್ದಲ್ಲದೇ ಅದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಸಿ ಮತ್ತು ಸದ್ರಿ ಘಟನೆಯ ಮೂಲಕ ಕೋಮು ಸಾಮರಸ್ಯ ಕದಡಲು ಹಾಗೂ ಧರ್ಮಗಳ ನಡುವೆ ದ್ವೇಷ ಉಂಟಾಗಲು ಪ್ರಚೋದಿಸಿದ ಇಬ್ಬರು ಆರೋಪಿಗಳ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ. ಅರುಣ್‌ ಕೆ ಅವರು ಮಾತನಾಡಿದ್ದು, ದಿನಾಂಕ: 05-07-2025 ರಂದು ಮಧ್ಯಾಹ್ನದ ಸಮಯದಲ್ಲಿ ಒಂದು ಹುಡುಗ ಮತ್ತು ಹುಡುಗಿ ನಿಂತಿದ್ದರು. ಆ ಸಂದರ್ಭದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಇಬ್ಬರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇವೆಂದು ಬೆದರಿಕೆವೊಡ್ಡಿದ್ದಾರೆ. ಅಲ್ಲದೇ ನೀವು ಅನ್ಯಧರ್ಮದವನೆಂದು ನಿಂದಿಸಿ, ಸ್ಥಳದಲ್ಲಿದ್ದ ಇತರ ಸಾರ್ವಜನಿಕರನ್ನು ಕರೆದು ಅವಮಾನಿಸಿ ವಿಡಿಯೋ ಮಾಡಿರುತ್ತಾರೆ ಎಂದು ಮಾಹಿತಿ ನೀಡಿದರು.

ನಂತರ ಈ ಅಪರಿಚಿತ ವ್ಯಕ್ತಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಮತ್ತು ಇನ್​​​ಸ್ಟ್ರಾಗ್ರಾಮ್ ನಲ್ಲಿ ಹರಿಯಬಿಟ್ಟು, ಪಿರ್ಯಾಧಿ ಅವರ ಮಗನನ್ನು ಅನ್ಯಧರ್ಮದವನೆಂದು ಈ ವಿಡಿಯೋದಲ್ಲಿ ಹೇಳಿರುತ್ತಾರೆ. ಈ ಘಟನೆಯ ಮೂಲಕ ಕೋಮು ಸಾಮರಸ್ಯ ಕದಡಲು ಹಾಗೂ ಧರ್ಮಗಳ ನಡುವೆ ದ್ವೇಷ ಉಂಟಾಗಲು ಪ್ರಚೋದನೆ ಮಾಡಿದ್ದಾರೆ ಎಂದು ಸಂತ್ರಸ್ತ ಹುಡುಗನ ತಂದೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಎಸ್​ಪಿ ತಿಳಿಸಿದರು.

ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿತರಾದ ಕುದ್ಮಾರು, ಕಡಬ ನಿವಾಸಿ ಪುರುಷೋತ್ತಮ (43) ಹಾಗೂ ಆರ್ಯಾಪು, ಪುತ್ತೂರು ನಿವಾಸಿ ರಾಮಚಂದ್ರ (38) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಇವರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 54/2025, ಕಲಂ: 126(2), 352, 351(2), 353(1)(C), 57, 196(1)(a) ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಾತ್ರವಲ್ಲದೇ ಈ ಪ್ರಕರಣದ ಸಂತ್ರಸ್ತರಿಬ್ಬರೂ ಅಪ್ರಾಪ್ತರು ಆಗಿರುವುದರಿಂದ, ಪ್ರಕರಣದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯಾವುದೇ ಮಾಧ್ಯಮಗಳು ಪ್ರಸಾರ ಮಾಡುವಾಗ ಬಾಲ ನ್ಯಾಯ ಕಾಯ್ದೆ ಹಾಗೂ ಬಾಲ ನ್ಯಾಯ ನಿಯಮಾವಳಿಗಳನ್ನು ಪಾಲಿಸಬೇಕೆಂದೂ ಎಸ್ಪಿಯವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version