Home ಟಾಪ್ ಸುದ್ದಿಗಳು ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ: ಹಿರಿಯ ಸಾಹಿತಿ ದೇವನೂರ ಮಹಾದೇವ

ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ: ಹಿರಿಯ ಸಾಹಿತಿ ದೇವನೂರ ಮಹಾದೇವ

ಬೆಂಗಳೂರು: ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹಿರಿಯ ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.

ಬೆಂಗಳೂರಿನಲ್ಲಿ ಎದ್ದೇಳು ಕರ್ನಾಟಕ ನಾಗರೀಕ ಅಭಿಯಾನ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂದು ಮತದಾರರು ಹೆಚ್ಚು ಜಾಗೃತರಾಗಿದ್ದಾರೆ ಎಂದು ಅನ್ನಿಸುತ್ತಿದೆ. ಹಿಂದಿನ ಯಾವ ಚುನಾವಣೆಯಲ್ಲೂ ನಾನು ಇಷ್ಟೊಂದು ಜಾಗೃತ ಪ್ರಜ್ಞೆಯನ್ನು ಕಂಡಿಲ್ಲ. ಮತಯಾಚಿಸಿ ಬಂದ ಅಭ್ಯರ್ಥಿಗಳಿಗೆ ಮತದಾರರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಸ್ಪರ್ಧಿಗಳಿಗೆ ಬೆವರಿಳಿಸುತ್ತಿದ್ದಾರೆ” ಎಂದರು.

ʼಡಬಲ್‌ ಇಂಜಿನ್‌ ಸರ್ಕಾರʼ ಎಂಬ ಮಾತನ್ನು ಬಿಜೆಪಿಯ ಚಿಕ್ಕವರಿಂದ ದೊಡ್ಡನಾಯಕರವರೆಗೂ ಹೇಳಿ ಹೇಳಿ ಈಗ ಕರ್ನಾಟಕದ ಜನತೆಯ ಕಿವಿ ತೂತಾಗಿಬಿಟ್ಟಿರಹುದು. ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಡಬಲ್‌ ಇಂಜಿನ್‌ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿಯೇ? ಇಂತಹ ಮಾತುಗಳನ್ನು ಪ್ರಜಾಪ್ರಭುತ್ವ, ಜನತಂತ್ರ ವ್ಯವಸ್ಥೆಯಲ್ಲಿ ಹೇಳುವುದು ಸರಿಯೆ? ಈ ಡಬಲ್‌ ಇಂಜಿನ್‌ ಸರ್ಕಾರ ಇದ್ದಲ್ಲಿ ಹೆಚ್ಚು ಅಭಿವೃದ್ಧಿ ಎನ್ನುವುದು ಒಕ್ಕೂಟ ವ್ಯವಸ್ಥೆಯ ಬುಡ ಅಲ್ಲಾಡಿಸಿದಂತಾಗುವುದಿಲ್ಲವೇ? ಹೀಗೆಲ್ಲಾ ನಾನು ತಲೆ ಕೆಡಿಸಿಕೊಂಡಿದ್ದೆ. ಆದರೆ ಮೊನ್ನೆ ತಾನೇ, ಚುನಾವಣಾ ಸಮೀಕ್ಷೆ ನಡೆಸುತ್ತಿದ್ದ ಟಿವಿ ಚಾನೆಲ್‌ಗೆ ನಮ್ಮ ಹಳ್ಳಿಗಾಡಿನ ವ್ಯಕ್ತಿಯೊಬ್ಬ ಕೇಳುತ್ತಾನೆ – ʼಡಬಲ್‌ ಇಂಜಿನ್‌ ಸರ್ಕಾರ ಅಂತಾರೆ! ಕಾಂಗ್ರೆಸ್‌ ಸರ್ಕಾರ ಇದ್ದಾಗ 10 ಕೆ.ಜಿ ಅಕ್ಕಿ ಕೊಡ್ತಾ ಇತ್ತು. ಬಿಜೆಪಿಯ ಈ ಡಬಲ್‌ ಇಂಜಿನ್‌ ಸರ್ಕಾರ 20 ಕೆ.ಜಿ ಕೊಡಬೇಕಿತ್ತು ತಾನೇ?ʼ. ಈ ಅನುಭವದ ಮಾತು, ಇಂದಿನ ಭ್ರಮಾತ್ಮಕ ಅಭಿವೃದ್ಧಿಗೆ ಮುಖಾಮುಖಿಯಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಬಾಯಿ ಬಿಟ್ರೆ ಕಾಂಗ್ರೆಸ್ ಏನ್ ಮಾಡ್ತು ಅಂತಾರೆ. ಆದ್ರೆ ಸಾರ್ವಜನಿಕ ಆಸ್ತಿಗಳನ್ನು ಕಾಂಗ್ರೆಸ್ ರಕ್ಷಣೆ ಮಾಡಿದೆ. ಡಬಲ್ ಎಂಜಿನ್‌ನ ಒಂದು ಎಂಜಿನ್‌ನಲ್ಲಿ ಧರ್ಮದ ದ್ವೇಷ, ಇನ್ನೊಂದು ಎಂಜಿನ್‌ನಲ್ಲಿ 40% ಕಮಿಷನ್‌ ಸೌಂಡ್ ಮಾಡ್ತಿದೆ ಅಷ್ಟೆ. ಬಿಜೆಪಿ ಸರ್ಕಾರವನ್ನು ಗುಜರಿಗೆ ಹಾಕಿ ಎಂದು ಕರೆ ನೀಡಿದರು.

ಭಾರತ್ ಜೋಡೊ ಯಾತ್ರೆಯ ಬಳಿಕ ಕಾಂಗ್ರೆಸ್ ಚೇತರಿಕೆ ಕಾಣುತ್ತಿದೆ. ಕಾಂಗ್ರೆಸ್ ಬಲವಾಗಿ ಇಲ್ಲದ ಕಡೆ ಜೆಡಿಎಸ್‌ನ್ನು ಗೆಲ್ಲಿಸೋಣ. ಬಿಜೆಪಿಯನ್ನು ಸೋಲಿಸೋಣ‌‌ ಎಂದರು.

Join Whatsapp
Exit mobile version