ರಾಮನಗರ: ಇದ್ರೀಸ್ ಪಾಷಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಪರಿವಾರದ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದಾನೆ ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಕೆರೆಹಳ್ಳಿ ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ನಡೆಸುತ್ತಿದ್ದೇವೆ. ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರ ಬಂಧನಕ್ಕೆ 4 ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಾತನೂರು ಟೌನ್ ನಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಆತನ ನಾಲ್ವರು ಸ್ನೇಹಿತರು ಮಂಡ್ಯದಿಂದ ಬರುತ್ತಿದ್ದ ಗಾಡಿಗೆ ಅಡ್ಡ ಹಾಕಿ ಅದರಲ್ಲಿ ಮಂಡ್ಯದಿಂದ ಹಸು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಸಾತನೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ” ಎಂದು ಅವರು ತಿಳಿಸಿದರು.
ಒಂದು ಹಸು ಸಾಗಾಣೆ ಮಾಡುತ್ತಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ನೀಡಿರುವುದು, ಮತ್ತೊಂದು ಗಾಡಿ ಚಾಲಕ ನಮ್ಮ ಗಾಡಿಗೆ ಪುನೀತ್ ಕೆರೆಹಳ್ಳಿ ಮತ್ತು ಆತನ ಸ್ನೇಹಿತರು ಅಕ್ರಮವಾಗಿ ತಡೆ ಹಾಕಿದ್ದಾರೆ ಎಂದು ನೀಡಿರುವುದು. ಮತ್ತೊಂದು ಪ್ರಕರಣ ಆ ದಿನ ಬೆಳಗ್ಗೆ ಇಲ್ಲಿಂದ ನೂರು ಮೀಟರ್ ದೂರದಲ್ಲಿ ಇದ್ರೀಸ್ ಅವರ ಮೃತದೇಹ ದೊರಕಿರುವುದರ ಬಗ್ಗೆ ಅವರ ಅಣ್ಣ ಕೊಲೆ ಕೇಸ್ ದಾಖಲು ಮಾಡಿದ್ದಾರೆ. ಮೂರು ಕೇಸ್’ಗಳ ತನಿಖೆ ನಡೆಯುತ್ತಿದೆ. ನಾಲ್ಕು ತಂಡಗಳನ್ನು ರಚನೆ ಮಾಡಿದ್ದೇವೆ. ಪುನೀತ್ ಕೆರೆಹಳ್ಳಿ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ.