ನವದೆಹಲಿ : ಮಾತೆತ್ತಿದರೆ ಬಿಜೆಪಿಗರು ಮತ್ತು ಅವರನ್ನು ಬೆಂಬಲಿಸುವ ಮಾಧ್ಯಮಗಳು ಗುಜರಾತ್, ಉತ್ತರ ಪ್ರದೇಶ ಮಾಡೆಲ್ ಆಡಳಿತದ ಬಗ್ಗೆ ಹೇಳುತ್ತಿರುತ್ತಾರೆ. ಆದರೆ, ಮಾಜಿ ಇಸ್ರೊ ಅಧ್ಯಕ್ಷ ಕೆ. ಕಸ್ತೂರಿರಂಗನ್ ಮುಖ್ಯಸ್ಥರಾಗಿರುವ ‘ಸಾರ್ವಜನಿಕ ವ್ಯವಹಾರಗಳ ಕೇಂದ್ರ’ ಎಂಬ ಸಂಸ್ಥೆಯು ಬಿಡುಗಡೆ ಮಾಡಿರುವ ‘ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ – 2020’ ಪಟ್ಟಿಯಲ್ಲಿ, ಉತ್ತಮ ಆಡಳಿತದ ರಾಜ್ಯಗಳಲ್ಲಿ ದಕ್ಷಿಣದ ನಾಲ್ಕು ರಾಜ್ಯಗಳೇ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಅದರಲ್ಲೂ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಇನ್ನೊಂದೆಡೆ, ಈ ಸೂಚ್ಯಂಕದಲ್ಲಿ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.
ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಈ ವರ್ಷದ ಸೂಚ್ಯಂಕದಲ್ಲಿ ದೊಡ್ಡ ರಾಜ್ಯಗಳ ಪೈಕಿ, ಕೇರಳ (1.388 ಸೂಚ್ಯಂಕ ಅಂಕಿ), ತಮಿಳುನಾಡು (0.912), ಆಂಧ್ರ ಪ್ರದೇಶ (0.531) ಮತ್ತು ಕರ್ನಾಟಕ (0.468) ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಉತ್ತರ ಪ್ರದೇಶ (-1.461), ಒಡಿಶಾ (-1.201) ಮತ್ತು ಬಿಹಾರ (-0.289) ಕೊನೆಯ ಮೂರು ಸ್ಥಾನದಲ್ಲಿವೆ.
ಚಿಕ್ಕ ರಾಜ್ಯಗಳು ಅಂದರೆ, 2 ಕೋಟಿಗಿಂತಲೂ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳ ಪೈಕಿ ಗೋವಾ ಮೊದಲ ಸ್ಥಾನದಲ್ಲಿದ್ದು, ಮೇಘಾಲಯ, ಹಿಮಾಚಲ ಪ್ರದೇಶ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಕೊನೆಯ ಸ್ಥಾನಗಳಲ್ಲಿ ಮಣಿಪುರ, ದೆಹಲಿ, ಉತ್ತರಾಖಂಡ ರಾಜ್ಯಗಳಿವೆ.
ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡೀಗಢ ಮೊದಲ ಸ್ಥಾನದಲ್ಲಿದ್ದು, ದಕ್ಷಿಣದ ಪಾಂಡಿಚೇರಿ, ಲಕ್ಷದ್ವೀಪ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿವೆ. ದಾದರ್ ಮತ್ತು ನಗರ್ ಹವೇಲಿ, ಅಂಡಮಾನ್, ಜಮ್ಮು-ಕಾಶ್ಮೀರ ಕೊನೆಯ ಸ್ಥಾನಗಳಲ್ಲಿವೆ.