ಬೆಂಗಳೂರು : ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿ, ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾರೆ.
ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಆನಂದ ಚೌಹಾಣ್ ಪ್ರಕರಣದ ವಿಚಾರಣೆ ನಡೆಸಿದ ವೇಳೆ, ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಆರೋಪಿಯ ಅನುಮತಿ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದರು. ಆ ಅರ್ಜಿಗೆ ಪೌಲ್ ಪರ ವಕೀಲ ನಿತಿನ್ ರಮೇಶ್ ಉತ್ತರಿಸಿದ್ದು, ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಲು ಅಮ್ರಿತ್ ಪೌಲ್ ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಪೌಲ್ ಅವರಿಗೆ ನಿಗದಿತ ಜಾಮೀನು ನೀಡುವಂತೆಯೂ ಅರ್ಜಿ ಸಲ್ಲಿಸಿದ ನಿತಿನ್ ಸುದೀರ್ಘವಾದ ಮಂಡಿಸಿದರು. ವಾದ ಆಲಿಸಿದ ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಜು.20ಕ್ಕೆ ಮುಂದೂಡಿತು.
ಅರ್ಜಿದಾರರು ಉತ್ತಮ ಸೇವಾ ನಡತೆ ಹೊಂದಿದ್ದಾರೆ. ಅವರು ಮುಗ್ಧರು, ಅವರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ಅವರ ವಿರುದ್ಧ ಬೇರೆ ಯಾವುದೇ ಆರೋಪಗಳಿಲ್ಲ. ಕೋರ್ಟ್ ವಿಧಿಸುವ ಯಾವುದೇ ಷರತ್ತುಗಳಿಗೆ ಬದ್ಧರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ಆದ್ದರಿಂದ, ಜಾಮೀನು ನೀಡಬೇಕು ಎಂದು ಪೌಲ್ ಪರ ವಕೀಲರು ಕೋರಿದರು.
ಇದಕ್ಕೆ ಪ್ರಾಸಿಕ್ಯೂಷನ್ ಪರ ವಕೀಲ ಪಿ.ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇದ್ದು ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.