ಮಂಗಳೂರು : ನಗರದ ಅಪಾರ್ಟ್ ಮೆಂಟೊಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿ ವಿದ್ಯಾರ್ಥಿನಿಯರು ಸೇರಿದಂತೆ ನಾಲ್ವರ ರಕ್ಷಣೆ ಮಾಡಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಗರದ ಅತ್ತಾವರದ ನಂದಿಗುಡ್ಡೆ ಬಳಿ ನಡೆದಿದೆ.
ಈ ಬಗ್ಗೆಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್ . ಶಶಿಕುಮಾರ್ ‘ದಂಧೆ ನಡೆಸುತ್ತಿದ್ದ ಮಹಿಳೆಯರು ಮತ್ತು ಪುರುಷನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಯಸ್ಕ ಯುವತಿಯರನ್ನು ನಿರಂತರವಾಗಿ ದಂಧೆಗೆ ಬಳಸಿಕೊಳ್ಳುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ. ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೋಕ್ಸೋ ಸೇರಿ ಇತರ ಕಾಯಿದೆಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದರು.
ರಕ್ಷಣೆ ಮಾಡಲಾದ ಸಂತ್ರಸ್ತೆಯರು ಪಿಯುಸಿ ವಿದ್ಯಾರ್ಥಿನಿಯರಾಗಿದ್ದು, ತಮ್ಮ ಮೇಲಾದ ದೌರ್ಜನ್ಯವನ್ನು ಕಾಲೇಜಿನ ಮುಖ್ಯಸ್ಥೆಯ ಬಳಿ ತೋಡಿಕೊಂಡಿದ್ದರು. ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದು, ವೀಡಿಯೋ ಬಯಲು ಮಾಡಿ ಮಾನ ಹರಾಜು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಕೇರಳ ಮೂಲದ ಗ್ರಾಹಕರು ಸೇರಿದಂತೆ ಸ್ಥಳೀಯರೂ ಇಲ್ಲಿ ಗ್ರಾಹಕರಾಗಿ ಬರುತ್ತಿದ್ದುಕೇರಳ ಮೂಲದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮಹಿಳಾ ಪೊಲೀಸ್ ಠಾಣೆಯ ಸಖಿ ಕೇಂದ್ರದಲ್ಲಿ ಬಾಲಕಿಯರ ಕೌನ್ಸಲಿಂಗ್ ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಗಂಭೀರವಾಗಿ, ಸಿಸಿಬಿ ಮೂಲಕ ಆಳವಾದ ತನಿಖೆ ನಡೆಸುವುದಾಗಿ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.