ಬೆಂಗಳೂರು: ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಮೀನನ್ನು ಸಂರಕ್ಷಣೆ ಮಾಡಲು ಈಗಿರುವ ಕಾನೂನು ತೊಡಕುಗಳನ್ನು ನಿವಾರಿಸಲು ಪಿ ಟಿ ಸಿ ಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲು ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಪ್ರಸ್ತಾಪಿಸಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಇದನ್ನು ಸ್ವಾಗತಿಸುವುದಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರ ಸ್ವಾಮಿ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನೆ ಕಾಯ್ದೆ ಪೂರ್ಣ ಬಳಕೆಗಾಗಿ ಇನ್ನಷ್ಟು ಸುಧಾರಣೆಗಾಗಿ 7ಡಿ ಸೆಕ್ಷನ್ ಪರಿಷ್ಕರಣೆಗೆ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಅತ್ಯಂತ ಉತ್ತಮ ಬೆಳವಣಿಗೆಯಾಗಿದೆ. ಎಸ್.ಸಿ.ಟಿ.ಎಸ್ ಪಿ ಹಣ ಸರಿಯಾದ ರೀತಿ ಪರಿಶಿಷ್ಟರ ಏಳಿಗೆಗಾಗಿ ಬಳಕೆಯಾಗಲಿದೆ ಎಂದು ಹೇಳಿದರು
ಪರಿಶಿಷ್ಟ ಜಾತಿ, ಪಂಗಡದ. ಬಡಕುಟುಂಬದವರಿಗೆ ಅಮೃತ ಜ್ಯೋತಿ ಯೋಜನೆಯಡಿ ಉಚಿತವಾಗಿ ಮಾಸಿಕ 75 ಯೂನಿಟ್ ವರೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಿರುವುದು ರಾಜ್ಯ ಸರ್ಕಾರ ಪರಿಶಿಷ್ಟರ ಬಗ್ಗೆ ಹೊಂದಿರುವ ಬದ್ದತೆಯಾಗಿದೆ ಎಂದರು.
ಪ್ರಸ್ತುತ ಎಸ್.ಸಿ..ಎಸ್.ಟಿ. ಗುತ್ತಿಗೆದಾರರಿಗೆ 50 ಲಕ್ಷ ವರೆಗಿನ ಸಣ್ಣ ಕಾಮಗಾರಿಗಳಲ್ಲಿ ಶೇ 24ರವರೆಗೆ ಮೀಸಲಾತಿ ನಿಗದಿಪಡಿಸಿದ್ದು, ಈ ಮೊತ್ತವನ್ನು ಒಂದು ಕೋಟಿ ರೂಪಾಯಿವರೆಗೆ ಹಚ್ಚಿಸಲಾಗಿದೆ ಇದೊಂದು ಎಸ್.ಸಿ.ಎಸ್.ಟಿ ಪರವಾಗಿ ಮಹತ್ವದ ನಿರ್ಧಾರವಾಗಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ಶ್ರಮ ಶಕ್ತಿ ಎಂಬ ಹೊಸ ಯೋಜನೆಯಡಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂಪಾಯಿಗಳ ಸಹಾಯ ಧನ ಡಿ.ಬಿ.ಟಿ.ಮೂಲಕ ನೀಡುವ ಕುರಿತು ಘೋಷಿಸಿರುವುದು ಉತ್ತಮ ನಿರ್ಧಾರವಾಗಿದೆ ಎಂದು ತಿಳಿಸಿದರು.
ಸಹಕಾರ ಬ್ಯಾಂಕ್ ಗಳಲ್ಲಿ ಬಡ್ಡಿರಹಿತ ಸಾಲ ಪಡೆಯಲು ಇದ್ದ ಮೂರು ಲಕ್ಷ ರೂಪಾಯಿ ಮೊತ್ತವನ್ನು ಐದು ಲಕ್ಷ ರೂಪಾಯಿ ವರೆಗೆ ಏರಿಕೆ ಮಾಡಿರುವುದು ಸರ್ಕಾರ ರೈತರ ಪರ ಹೊಂದಿರುವ ಕಾಳಜಿಯಾಗಿದೆ ಎಂದು ಹೇಳಿದರು.