ನವದೆಹಲಿ: ಹಿಂಡೆನ್ ಬರ್ಗ್ ವರದಿ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಷೇರುಗಳಲ್ಲಿನ ಷೇರುಗಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯ ನಿಯಂತ್ರಣ ಕಾರ್ಯವಿಧಾನಗಳನ್ನು ಬಲಪಡಿಸಲು ರಚಿಸುವ ತಜ್ಞರ ಸಮಿತಿಯಲ್ಲಿ ಯಾರು ಇರಬೇಕು ಎಂಬುದನ್ನು ನಾವು ತೀರ್ಮಾನಿಸುತ್ತೇವೆ, ನೀವು ಹೇಳಿದ ವ್ಯಕ್ತಿಗಳನ್ನು ಸಮಿತಿಗೆ ನೇಮಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಖಡಕ್ ಆಗಿ ಹೇಳಿದೆ.
ಗೌತಮ್ ಅದಾನಿ ಕುರಿತು ಹಿಂಡನ್ ಬರ್ಗ್ ಬಹಿರಂಗಪಡಿಸಿದ ವರದಿಯ ಉಲ್ಲೇಖಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ಕೇಂದ್ರದ ಮುಚ್ಚಿದ ಲಕೋಟೆಯ ವರದಿಯನ್ನು ನಿರಾಕರಿಸಿದೆ.
“ನಾವು ಜನಸಾಮಾನ್ಯ ಹೂಡಿಕೆದಾರರ ಹಿತಾಸಕ್ತಿಗಾಗಿ ಪಾರದರ್ಶಕತೆ ಬಯಸುತ್ತೇವೆ. ಹಾಗಾಗಿ ಈ ತಜ್ಞರ ಸಮಿತಿಯಲ್ಲಿ ಯಾರಿರಬೇಕೆಂಬ ಸಲಹೆಗಳನ್ನು ಕೇಂದ್ರ ಸರ್ಕಾರದಿಂದಾಗಲಿ, ಅರ್ಜಿದಾರರಿಂದಾಗಲಿ ತೆಗೆದುಕೊಳ್ಳದೆ ನಾವೇ ತೀರ್ಮಾನಿಸುತ್ತೇವೆ” ಎಂದಿದೆ.