ಬೆಂಗಳೂರು: ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಿ ಸುಗ್ರೀವಾಜ್ಞೆ ಜಾರಿಮಾಡಲಾಗುತ್ತದೆ. ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದೆ. ಆದರೆ ವಿಧಾನಪರಿಷತ್ ನಲ್ಲಿ ವಿಧೇಯಕ ಅಂಗೀಕಾರ ಆಗಿರಲಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಇಂದು ಬೆಳಗ್ಗೆ ಸಭೆಯನ್ನು ನಡೆಸಲಾಗುತ್ತಿದ್ದು, ಅದರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಪಟ್ಟಂತೆ ಕಾನೂನು ಸಚಿವರು, ಅಡ್ವೊಕೇಟ್ ಜನರಲ್ ಸಂಬಂಧಪಟ್ಟವರ ಜೊತೆ ಚರ್ಚಿಸಿ ಸುಪ್ರೀಂ ಕೋರ್ಟ್ ನ ಎರಡು ತೀರ್ಪುಗಳ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಮಾಡಿ, ರಾಜಕೀಯ ಪ್ರಾತಿನಿಧ್ಯ ನೀಡಲು ಈಗಾಗಲೇ ಕಮಿಷನ್ ನೇಮಿಸಿದ್ದು ಅದರ ಬಗ್ಗೆ ಹಾಗೂ ವಿರೋಧ ಪಕ್ಷದ ನಾಯಕರು ಬರೆದಿರುವ ಪತ್ರ ಕುರಿತು ಕೂಡ ಚರ್ಚೆ ಮಾಡಲಾಗುವುದು ಎಂದರು.