ತಲಪಾಡಿ: ತಲಪಾಡಿ ಗ್ರಾಮದಲ್ಲಿ ಇಂದು ಗ್ರಾಮ ವಾಸ್ತವ್ಯ ಹಮ್ಮಿಕೊಂಡಿದ್ದ ನೂತನ ಉಳ್ಳಾಲ ತಾಲ್ಲೂಕಿನ ನಿಯೋಜಿತ ತಹಶೀಲ್ದಾರ್ ಗುರುಪ್ರಸಾದ್ ಅವರನ್ನು ಭೇಟಿ ಮಾಡಿದ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-SDPI ತಲಪಾಡಿ ಗ್ರಾಮ ಸಮಿತಿಯ ನಿಯೋಗ ಗ್ರಾಮದಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತು ಮನವಿ ಸಲ್ಲಿಸಿತು.
ಗ್ರಾಮದಲ್ಲಿ ಬಿ.ಪಿ.ಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಫಲಾನುಭವಿಗಳಿಗೆ ಕಾರ್ಡ್ ಮಂಜೂರು ಮಾಡುವುದು, ಪಡಿತರ ವ್ಯವಸ್ಥೆಯ ಸಮಸ್ಯೆಯನ್ನು ನಿವಾರಿಸುವುದು, ನೂತನವಾಗಿ ರಚನೆಯಾದ ಉಳ್ಳಾಲ ತಾಲ್ಲೂಕು ಕಚೇರಿಯನ್ನು ಸಂಪೂರ್ಣವಾಗಿ ಕಾರ್ಯಾರಂಭ ಮಾಡುವುದರ ಜೊತೆಗೆ ಎಲ್ಲಾ ಸರ್ಕಾರಿ ಕಚೇರಿಗಳು ಇಲ್ಲಿಗೆ ಬರುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ತಹಶೀಲ್ದಾರ್ ರವರನ್ನು ಕೋರಲಾಯಿತು.
ತಲಪಾಡಿ ಎಸ್.ಡಿ.ಪಿ.ಐ ಗ್ರಾಮ ಪಂಚಾಯತ್ ಸದಸ್ಯರ ಪರವಾಗಿ ಟಿ. ಇಸ್ಮಾಯಿಲ್ ಕೆಸಿ ರೋಡಿನಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣ, ಕಸ ವಿಲೇವಾರಿಗೆ ಘಟಕ ಸ್ಥಾಪನೆ, ನೀರಿನ ಬಾಕಿ ಮೊತ್ತದ ಪಾವತಿ ಹಾಗೂ ತಲಪಾಡಿ ಸರ್ವಿಸ್ ರಸ್ತೆಯ ನಿರ್ಮಾಣದ ಬಗ್ಗೆ ಪ್ರತ್ಯೇಕ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಕೆಸಿ ರೋಡ್ ನಲ್ಲಿ ಬಸ್ ಸ್ಟ್ಯಾಂಡ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಈ ಕುರಿತು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಿಯೋಗದಲ್ಲಿ ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆಸಿ ರೋಡ್, ಗ್ರಾಮ ಸಮಿತಿಯ ಅಧ್ಯಕ್ಷ ಇಮ್ರಾನ್ ಪೂಮಣ್ಣು, ಕಾರ್ಯದರ್ಶಿ ರಶೀದ್ ಇಂಜಿನಿಯರ್, ಗ್ರಾಪಂ ಸದಸ್ಯ ಟಿ. ಇಸ್ಮಾಯಿಲ್ ಉಪಸ್ಥಿತರಿದ್ದರು.