ಜೈಪುರ: 70 ವರ್ಷಗಳಲ್ಲಿ ಕಾಂಗ್ರೆಸ್ ನಿರ್ಮಿಸಿದ ಎಲ್ಲವನ್ನೂ ಇದೀಗ ಬಿಜೆಪಿಯ 7 ವರ್ಷದ ಆಡಳಿತದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಜೈಪುರದಲ್ಲಿ ಹಣದುಬ್ಬರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಮೆಹಂಗೈ ಹಠಾವೋ ರ‍್ಯಾಲಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಕಿಡಿಕಾರಿದ್ದಾರೆ.
ಬಿಜೆಪಿಗರು ಕಾಂಗ್ರೆಸ್ 70 ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಆದರೆ 70 ವರ್ಷಗಳಲ್ಲಿ ಕಾಂಗ್ರೆಸ್ ನಿರ್ಮಿಸಿದ ಎಲ್ಲವನ್ನೂ ಇದೀಗ ಬಿಜೆಪಿಯ 7 ವರ್ಷದ ಆಡಳಿತದಲ್ಲಿ ಮಾರಾಟ ಮಾಡಿದೆ ಎಂದಿದ್ದಾರೆ. 7 ವರ್ಷಗಳ ಬಿಜೆಪಿ ಆಡಳಿತದಲ್ಲಿ ಆರೋಗ್ಯ ಸೇವೆಗಾಗಿ ಒಂದೇ ಒಂದು ಏಮ್ಸ್ ಸಂಸ್ಥೆಯನ್ನು ನಿರ್ಮಾಣ ಮಾಡಲಾಗಿದೆಯೇ? ಎಂದು ಬಿಜೆಪಿಯನ್ನು ಪ್ರಶ್ನಸಿದ್ದಾರೆ.
ಅಭಿವೃದ್ಧಿಯೆಲ್ಲಿ ಎಂದು ಪ್ರಶ್ನಸುವ ನೀವು, ಕಾಂಗ್ರೆಸ್ ಅವಧಿಯಲ್ಲಿ ನಿರ್ಮಾಣವಾಗಿರುವ ಪ್ರತಿ ವಿಮಾನ ನಿಲ್ದಾಣಗಳನ್ನು ನೀವು ಬಳಸುತ್ತಿದ್ದೀರಿ ಎಂಬುವುದನ್ನು ಮರೆಯಬೇಡಿ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ನೀವು ಮಾಡಿದ ಅಭಿವೃದ್ಧಿ ಕಾರ್ಯಗಳೇನು ಎಂಬುವನ್ನು ತಿಳಿಸಿ ಎಂದಿದ್ದಾರೆ.
ಎಲ್‍ಪಿಜಿ ಸಿಲಿಂಡರ್ ದರ ಸಾವಿರ ರುಪಾಯಿ ದಾಟಿದೆ. ಆಹಾರ ಪದಾರ್ಥಗಳು ಮತ್ತು ಇಂಧನದ ಬೆಲೆ ಗಗನಕ್ಕೇರಿದೆ, ದಿನ ಬಳಕೆಯ ವಸ್ತುಗಳ ದರವೂ ಏರಿಕೆ ಕಂಡಿದೆ. ಆದರೆ ಬಗ್ಗೆ ಜನಸಾಮಾನ್ಯರ ಮಾತನ್ನು ಯಾವೊಬ್ಬ ಬಿಜೆಪಿ ನಾಯಕನೂ ಕೇಳಿಸಿಕೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.