► ಸಂಸದೆಯನ್ನು ಕೂರಿಸಿ ಮಾತನಾಡಿಸುವಷ್ಟು ಸೌಜನ್ಯವೂ ಇಲ್ಲವಾಯಿತೇ ಎಂದು ಪ್ರಶ್ನಿಸಿದ ನೆಟ್ಟಿಗರು !
ಬೆಳಗಾವಿ: ಸಂಸದೆ ಮಂಗಲಾ ಅಂಗಡಿಯವರು ಸಿಎಂ ಬಸವರಾಜ ಬೊಮ್ಮಾಯಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ವೇಳೆ ಅಗೌರವ ತೋರಿದ ಹಿನ್ನೆಲೆಯಲ್ಲಿ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಸಂಸದೆ ಮಂಗಲಾ ಅಂಗಡಿ ಯವರು ಭೇಟಿಯಾದ ಸಂದರ್ಭದಲ್ಲಿ , ಬೊಮ್ಮಾಯಿ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದು ಸದ್ಯ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಸದೆ ಮಹಿಳಾ ಅಂಗಡಿ ವಿನಯದಿಂದ ಮನವಿ ಸಲ್ಲಿಸುತ್ತಿದ್ದರೆ, ಮುಖ್ಯಮಂತ್ರಿಯು ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದು ಸರಿಯಲ್ಲ. ಇಂತಹ ನಡವಳಿಕೆ ಮುಖ್ಯಮಂತ್ರಿಯವರಿಗೆ ಶೋಭೆ ತರುವುದಿಲ್ಲ’ ಎಂದು ನೆಟ್ಟಿಗರು ಕುಟುಕಿದ್ದಾರೆ. ಸಂಸದರನ್ನು ಕೂರಿಸಿ ಮಾತನಾಡಿಸುವಷ್ಟು ಸೌಜನ್ಯವನ್ನೂ ಮುಖ್ಯಮಂತ್ರಿ ತೋರದಿರುವುದು ಸರಿಯಲ್ಲ’ ಎಂಬಿತ್ಯಾದಿ ಪೋಸ್ಟ್‌ಗಳನ್ನು ಹಾಕಿ ಛೀಮಾರಿ ಹಾಕಿದ್ದಾರೆ.
‘ಕಿತ್ತೂರು– ಧಾರವಾಡ ರೈಲು ಮಾರ್ಗಕ್ಕೆ ಶೀಘ್ರ ಆಡಳಿತಾತ್ಮಕ ಅನುಮೋದನೆ ನೀಡಬೇಕು. ಈ ಮಾರ್ಗದಿಂದ ಇಲ್ಲಿನ ಜನರಿಗೆ ಸಾಕಷ್ಟು ಅನುಕೂಲ ಆಗುತ್ತದೆ. ಶೈಕ್ಷಣಿಕ ಹಾಗೂ ಕೈಗಾರಿಕಾ ದೃಷ್ಟಿಯಿಂದಲೂ ಅಭಿವೃದ್ಧಿ ಕಾಣಲಿದೆ, ಮತ್ತು ಪ್ರವಾಹದಿಂದ ಹಾಳಾದ ರಸ್ತೆಗಳ ಸುಧಾರಣೆಗೂ ತುರ್ತು ಅನುಮೋದನೆ ಕೊಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಭೇಟಿಯ ವೇಳೆ ತೆಗೆದ ಫೋಟೊವನ್ನು ಸಂಸದೆ ಮಂಗಳಾ ಅಂಗಡಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.