ರಾಷ್ಟ್ರಪತಿ ಚುನಾವಣೆ: ಜೆಡಿಎಸ್ ಬೆಂಬಲ ಕೋರಿದ ದ್ರೌಪದಿ ಮುರ್ಮು

Prasthutha|

ಬೆಂಗಳೂರು: ಎನ್ ಡಿ ಎ ಬೆಂಬಲಿತ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಇಂದು ಸಂಜೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬೆಂಬಲ ಕೋರಿದರು.

- Advertisement -

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರದ ಇನ್ನೋರ್ವ ಸಚಿವ ಕಿಶನ್ ರೆಡ್ಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತಿತರರ ಜತೆ ದೇವೇಗೌಡರ ನಿವಾಸಕ್ಕೆ ದ್ರೌಪದಿ ಮುರ್ಮು ಅವರು ಆಗಮಿಸಿ ಮಾತುಕತೆ ನಡೆಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಹಾಜರಿದ್ದರು.

- Advertisement -

ಇದೇ ವೇಳೆ ದೇವೇಗೌಡರು, ಶ್ರೀಮತಿ ಚನ್ನಮ್ಮ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ಅವರು ಸೇರಿ ಇಡೀ ಕುಟುಂಬದ ಸದಸ್ಯರೆಲ್ಲರೂ ಮುರ್ಮು ಅವರಿಗೆ ಆತಿಥ್ಯ ನೀಡಿ ಆತ್ಮೀಯವಾಗಿ ಗೌರವಿಸಿದರು.

ಮಾತುಕತೆ ಮುಗಿಸಿ ತೆರಳಿದ ದ್ರೌಪದಿ ಮುರ್ಮು ಅವರನ್ನು ಚನ್ನಮ್ಮ ದೇವೇಗೌಡರು ಕಾರಿನವರೆಗೂ ಬಂದು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಸೇರಿದಂತೆ ಇಡೀ ಕುಟುಂಬ ಸದಸ್ಯರೆಲ್ಲರೂ ಹಾಜರಿದ್ದರು.

ಚರ್ಚಿಸಿ ಬೆಂಬಲ ನಿರ್ಧಾರ:

ಮಾತುಕತೆ ನಂತರ ಜೆಡಿಎಸ್‌ ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ದೇವೇಗೌಡರಿಗೆ ಮನವಿ ಮಾಡಿದರು. ಸಂಸದೀಯ ಮಂಡಳಿ ಸಭೆ ನಡೆಸಿ ತಮ್ಮ ಅಭಿಪ್ರಾಯ ತಿಳಿಸುವುದಾಗಿ ದೇವೆಗೌಡರು ತಿಳಿಸಿದರು. ಶೀಘ್ರದಲ್ಲೆ ಸಭೆ ಕರೆದು ಈ ಬಗ್ಗೆ  ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.

ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ  ಹೇಳಿರುವಂತೆ ದ್ರೌಪದಿ ಮುರ್ಮು ಅವರು ಬುಡಕಟ್ಟು  ಸಮುದಾಯಕ್ಕೆ ಸೇರಿದ್ದು, ಅವರಿಗೆ ಬೆಂಬಲ ನೀಡುವುದು ನಮಗೆ ಸರಿ ಅನಿಸಿದೆ. ಅದು ಹೆಮ್ಮೆ ಸಹ. ಬಹುತೇಕ ಅವರಿಗೆ ಬೆಂಬಲ ವ್ಯಕ್ತಪಡಿಸುವ ನಿರ್ಧಾರ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಗಲಿದೆ ಎಂದು ಅವರು ತಿಳಿಸಿದರು.

Join Whatsapp
Exit mobile version